ಹಾಸನ: ಕೊರೊನಾ ವೇಗವನ್ನು ಕಟ್ಟಿಹಾಕಲು ಇಂದು ರಾತ್ರಿ 8 ಗಂಟೆಯಿಂದಲೇ ರಾಜ್ಯಾದ್ಯಂತ ಸಂಡೆ ಕರ್ಫ್ಯೂ ಜಾರಿಯಾಗುತ್ತಿದ್ದು, ಸೋಮವಾರ ಬೆಳಗ್ಗೆ 5ಗಂಟೆಯ ತನಕ ರಾಜ್ಯ ಸ್ತಬ್ಧವಾಗಲಿದೆ. ನಗರ, ತಾಲೂಕು ಹಾಗೂ ಹಳ್ಳಿಗಳಲ್ಲಿ 144 ಸೆಕ್ಷನ್ ಜಾರಿಗೊಳ್ಳಲಿದೆ.
ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗೆ ಕಡಿವಾಣ ಬೀಳಲಿದೆ. ಸುಖಾಸುಮ್ಮನೆ ರಸ್ತೆಗಿಳಿದರೆ ಬೇಕಾಬಿಟ್ಟಿ ಓಡಾಡಿದರೆ ಶಿಕ್ಷೆ ಗ್ಯಾರಂಟಿ. ಯಾವುದೇ ವಾಹನಗಳು ರಸ್ತೆಗಿಳಿಯುವುದಿಲ್ಲ. ಹೋಟೆಲ್‌ಗಳು, ಮಸೀದಿ, ಚರ್ಚ್, ದೇವಸ್ಥಾನ ಹಾಗೂ ಎಪಿಎಂಸಿಗಳು ಕೂಡ ಬಂದ್ ಆಗಲಿವೆ. ನಗರಗಳಲ್ಲಿ ವಾಕಿಂಗ್, ಪಾರ್ಕ್ ಸುತ್ತಾಡಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಬಾರ್ಗಳು, ಮದ್ಯದಂಗಡಿಗಳು ಕೂಡ ಸಂಪೂರ್ಣ ಬಂದ್ ಆಗಲಿವೆ. ಸಂಡೆ ಕರ್ಫ್ಯೂನಲ್ಲಿ ಹಾಲು, ತರಕಾರಿ, ಪೇಪರ್ ಎಂದಿನಂತೆ ಸಿಗಲಿದೆ. ದಿನಸಿ ವಸ್ತುಗಳು ಕೂಡ ಲಾಕ್ಡೌನ್ ಸಮಯದಲ್ಲಿ ಲಭ್ಯವಿರಲಿದೆ. ಅಲ್ಲದೆ ತುರ್ತು ಸೇವೆಗಳಾದ ಮೆಡಿಕಲ್ ಶಾಪ್, ಆ್ಯಂಬುಲೆನ್ಸ್, ವೈದ್ಯರ ಸೇವೆ ಲಭ್ಯವಿದೆ.