ಅರಕಲಗೂಡು: ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ಸ್ಥಾನವನ್ನು ಲಕ್ಷಾಂತರ ರೂ.ಗೆ ಹರಾಜು ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಯವರೆಗೆ ಸವಲತ್ತುಗಳು ದೊರಕಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಆದರೆ ಇದೀಗ ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಲಕ್ಷಾಂತರ ರೂ.ಗೆ ಹರಾಜು ಹಾಕುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ ಮಂಡ್ಯದಲ್ಲಿ ಹರಾಜಿನಲ್ಲಿ ಬಿಕರಿಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನ, ಸದ್ಯ ಹಾಸನದಲ್ಲೂ ಲಕ್ಷ ಲಕ್ಷಕ್ಕೆ ಹರಾಜು ಆಗುತ್ತಿರುವುದಕ್ಕೆ ವಿಡಿಯೋವೊಂದು ಪುಷ್ಠಿ ನೀಡುತ್ತಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗುಲಿ ಗ್ರಾಮದಲ್ಲಿ ನಡೆದ ಹರಾಜು ಪ್ರಕ್ರಿಯೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡ್ತಿದೆ.
ಗ್ರಾಮಸ್ಥರು ಹೇಳೋದೇನು..?
ಪಂಚಾಯಿತಿ ಸದಸ್ಯನ ಸ್ಥಾನವನ್ನ ಹರಾಜು ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಸ್ಥರ ವರಸೆಯೇ ಬದಲಾಗಿದೆ. ದೇವಾಲಯದ ಜೀರ್ಣೋದ್ದಾರಕ್ಕೆ ಜಮೀನು ಹರಾಜು ಮಾಡಿದ್ದು, ಈ ವಿಡಿಯೋ ಬಳಸಿಕೊಂಡಿರುವ ಕಿಡಿಗೇಡಿಗಳು ಗ್ರಾಮಕ್ಕೆ ಕೆಟ್ಟ ಹೆಸರು ತರಲು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ ಎನ್ನುತ್ತಾರೆ.
ಇದನ್ನೂ ಓದಿ: 5 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು
ಗ್ರಾಮದಲ್ಲಿ ನಡೆದ ಪಂಚಾಯಿತಿ ಸ್ಥಾನಗಳ ಈ ಹರಾಜು ಪ್ರಕ್ರಿಯೆಯಲ್ಲಿ ಒಂದು ಸ್ಥಾನ 13 ಲಕ್ಷಕ್ಕೂ ಮೀರಿ ಹರಾಜು ಕೂಗಲಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಹಣ ಉಳ್ಳವರು ಭಾಗವಹಿಸಿದ್ದು, ಊರಿನ ಅಭಿವೃದ್ದಿಯ ಹೆಸರಲ್ಲಿ ಊರಿನ ಹಿರಿಯರು ಈ ರೀತಿ ಪಂಚಾಯಿತಿ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಿಸಿ ಮೂರು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕರೆದು ಹರಾಜು ಕೂಗಿಸಿದ್ದಾರೆ ಎನ್ನಲಾಗಿದೆ.
27 ಲಕ್ಷಕ್ಕೆ ಹರಾಜಾದ ಸದಸ್ಯ ಸ್ಥಾನ:
ಇನ್ನು ಚನ್ನರಾಯಟ್ಟಣ ತಾಲೂಕಿನಲ್ಲಿಯೂ ಕೂಡಾ ಬಹಿರಂಗ ಹರಾಜಾಗಿದ್ದು, ಶ್ರವಣಬೆಳಗೊಳ ಸಮೀಪದ ಬೆಕ್ಕ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಹಡೇನಹಳ್ಳಿಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 27.5 ಲಕ್ಷಕ್ಕೆ ಹರಾಜಾಗಿದ್ದರೇ, ಅದ್ದಿಹಳ್ಳಿಯಲ್ಲಿ 26 ಲಕ್ಷಕ್ಕೆ ಹರಾಜಾಗಿದೆ ಎನ್ನಲಾಗಿದೆ. ಇನ್ನು ದಿಡಗ ಗ್ರಾಮ ಪಂಚಾಯತಿ ಕರಿಕ್ಯಾತನಹಳ್ಳಿಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 17 ಲಕ್ಷಕ್ಕೆ ಹಾಗೂ ದಿಡಗ ಗ್ರಾಮದ ಅಭ್ಯರ್ಥಿ 11.5 ಲಕ್ಷಕ್ಕೆ ಬಿಕರಿಯಾಗಿದ್ದಾರೆ ಎಂಬ ಸುದ್ದಿ ಇದೆ.
ಅಲ್ಲದೇ ಮೆಳ್ಳಹಳ್ಳಿ, ಪುರದ ಹೊಸಹಳ್ಳಿ, ಕನುವನಘಟ್ಟದಲ್ಲಿ ತಲಾ 10 ಲಕ್ಷ ರೂ.ಗೆ ಸದಸ್ಯ ಸ್ಥಾನಗಳು ಬಿಕರಿಯಾಗಿವೆ. ಒಟ್ಟಾರೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳು ಸಂತೆಯಲ್ಲಿ ಜಾನುವಾರುಗಳು ಮಾರಾಟವಾಗುವ ರೀತಿಯಲ್ಲಿ ಹರಾಜಾಗುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದು ತಿಳಿಯದಾಗಿದೆ.