ಹಾಸನ: ಜಿಲ್ಲೆಯಲ್ಲಿ ಹಲವೆಡೆ ಗ್ರಾಮದಲ್ಲಿನ ಕೆರೆ ಮಣ್ಣನ್ನು ಕೆಲವರು ಅಕ್ರಮವಾಗಿ ತೆಗೆಯುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಸಾಲಗಾಮೆ ಗ್ರಾಮದ ಸರ್ವೆ ನಂ.158ರ ಸುಮಾರು 2.34 ಗುಂಟೆ ಪ್ರದೇಶದಲ್ಲಿ ಸರ್ಕಾರಿ ಮುಗುಳಿಕಟ್ಟೆ ಇದ್ದು, ಶಂಖ ಗ್ರಾಮಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಇದೆ. ಈ ಕಟ್ಟೆಯಿಂದ ಸುಮಾರು 15 ರಿಂದ 20 ಅಡಿ ಆಳದಲ್ಲಿ ಕೆಲವರು ಅಕ್ರಮವಾಗಿ ಮಣ್ಣು ತೆಗೆದು ತಮ್ಮ ಜಮೀನಿಗೆ ಬಳಸಿಕೊಳ್ಳುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದನ,ಕರುಗಳು ನೀರು ಕುಡಿಯಲು ಕಟ್ಟೆ ಒಳಗಡೆ ಇಳಿದರೆ ಮೇಲೆ ಬರಲು ಸಾಧ್ಯವಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಗ್ರಾಮದ ಯಾರಾದರೂ ಪ್ರಶ್ನೆ ಮಾಡಿದರೆ ಜಗಳಕ್ಕೆ ಬರುತ್ತಾರೆ. ಈ ಬಗ್ಗೆ ಸ್ಥಳೀಯ ನಾಡ ಕಚೇರಿ, ತಹಶೀಲ್ದಾರ್, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.