ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದ್ದು, ಆಲೂರಿನಲ್ಲಿ ಒಂದೇ ದಿನ 54 ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಹೀಗಾಗಿ ಕಳೆದ ವಾರವೇ ತಾಲೂಕು ಆಡಳಿತ ಆ ಗ್ರಾಮವನ್ನು ಸೀಲ್ ಡೌನ್ ಮಾಡಿತ್ತು. ಆದ್ರೆ ರಾತ್ರೋರಾತ್ರಿ ಅದನ್ನು ತೆರೆವುಗೊಳಿಸಿರುವುದಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಆಲೂರು ತಾಲೂಕಿನ ಧರ್ಮಪುರಿ ಎಂಬ ಗ್ರಾಮದಲ್ಲಿ ಒಂದೇ ದಿನ 54 ಸೋಂಕು ಪ್ರಕರಣ ಬಂದ ಹಿನ್ನೆಲೆಯಲ್ಲಿ ವಾರದ ಹಿಂದೆ ಗ್ರಾಮವನ್ನು ಅತೀ ಸೂಕ್ಷ್ಮ ಪ್ರದೇಶ ಎಂಬುದಾಗಿ ಪರಿಗಣಿಸಿ ಅದನ್ನು ಸೀಲ್ ಡೌನ್ ಮಾಡಲಾಗಿತ್ತು. ಗ್ರಾಮಕ್ಕೆ ಯಾರೂ ಪ್ರವೇಶ ಮಾಡದಂತೆ ಮರದ ಬೇಲಿಯನ್ನು ಹಾಕಲಾಗಿತ್ತು. ಆದ್ರೆ ಕೆಲವು ಕಿಡಿಗೇಡಿಗಳು ರಾತ್ರೋರಾತ್ರಿ ಅದನ್ನು ಕಿತ್ತು ಹಾಕಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು, ತಾಲೂಕು ಆಡಳಿತ ಗ್ರಾಮಕ್ಕೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಇನ್ನು ಗ್ರಾಮವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ ಹಿನ್ನೆಲೆಯಲ್ಲಿ ಗ್ರಾಮದ ಸೋಂಕಿತರು ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜಾನುವಾರುಗಳಿಂದ ಕರೆದ ಹಾಲನ್ನು ಯಾರೂ ಪಡೆಯುತ್ತಿಲ್ಲ. ಹೀಗಾಗಿ ರೈತಾಪಿ ಕುಟುಂಬಗಳು ಕಷ್ಟ ಅನುಭವಿಸುತ್ತಿವೆ. ಪ್ರತಿನಿತ್ಯ ಗ್ರಾಮದಿಂದ ಒಂದೂವರೆ ಸಾವಿರ ಲೀಟರ್ ಹಾಲು ನಂದಿನಿ ಡೈರಿಗೆ ರಫ್ತಾಗುತ್ತಿತ್ತು. ಆದರೆ ಈಗ ಸೀಲ್ ಡೌನ್ ಮಾಡಿರುವುದು ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ ಕೆಲವು ಕಿಡಿಗೇಡಿಗಳು ಗ್ರಾಮಕ್ಕೆ ಹಾಕಲಾಗಿದ್ದ ಸೀಲ್ಡೌನ್ ಬೇಲಿಯನ್ನು ತೆರವುಗೊಳಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಕೆಲವರು ಇದನ್ನು ಬಹಳ ಲಘುವಾಗಿ ಪರಿಗಣಿಸಿದ್ದಾರೆ. ಇಂತಹ ಸಾಹಸಕ್ಕೆ ಕೈ ಹಾಕಬಾರದು. ಈಗಾಗಲೇ ನಾವು ನಿಮಗೆ ಹಲವು ಬಾರಿ ಹೇಳಿದರೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡ್ತಿದ್ದೀರಾ. ಮತ್ತೊಮ್ಮೆ ಈ ರೀತಿಯಾದ್ರೆ ತಾಲೂಕು ಆಡಳಿತದಿಂದ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಶಿರೀನ್ ತಾಜ್ ಕೂಡ, ನಾವು ಈ ಗ್ರಾಮಕ್ಕೆ 3ನೇ ಬಾರಿ ಬಂದು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಆದ್ರೂ ನೀವು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡ್ತಿರೋದು ಜೀವದ ಜೊತೆ ಚಲ್ಲಾಟವಾಡಿದಂತೆ. ರಸ್ತೆಯಲ್ಲಿ ಹಾಕಲಾಗಿದ್ದ ತಂತಿ ಬೇಲಿಯನ್ನು ಕಿತ್ತು ಹಾಕಿರುವವರು ಯಾರು ಎಂಬುದು ಗೊತ್ತಾದರೆ ಖಂಡಿತಾ ನಿಮಗೆ ಜೈಲು ಶಿಕ್ಷೆಯಾಗುತ್ತದೆ. ಆದ್ರೆ ಇಂತಹ ಘಟನೆ ಮುಂದೆ ಜರುಗದಂತೆ ನೋಡಿಕೊಳ್ಳಿ. ಇಲ್ಲವಾದ್ರೆ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.