ಹಾಸನ: ಜಗದ್ಗುರು ಆದಿಶಂಕರಚಾರ್ಯರ ಪರೋಪಕಾರ ಪುಣ್ಯಯಾ, ಪಾಪಯಾ ಪರಪೀಡನಂ ಎಂಬ ಮಾತನ್ನ ಇಂದಿನ ಯುಗದಲ್ಲಿ ಅಳವಡಿಸಿಕೊಂಡರೆ ದೇಶ ಸುಭಿಕ್ಷವಾಗಿರುತ್ತದೆ. ಉಪಕಾರ ಮಾಡದಿದ್ದರೂ ಅಪಕಾರ ಮಾಡುವುದು ಪಾಪಕ್ಕೆ ಸಮಾನ ಎಂದು ಶೃಂಗೇರಿ ಪೀಠದ ಕಿರಿಯ ಸ್ವಾಮಿಜೀಗಳಾದ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ಭಾರತಿ ನಿವಾಸ ಮತ್ತು ಕಲ್ಯಾಣ ಮಂಟಪದ ಶಿಲಾನ್ಯಾಸವನ್ನ ನೆರವೇರಿಸಿದ ಬಳಿಕ ಆಶೀರ್ವಚನ ನೀಡಿದರು. ಇನ್ನೊಬ್ಬರಿಗೆ ಉಪಕಾರ ಮಾಡುವುದು ಪುಣ್ಯ. ಅಪಕಾರ ಮಾಡಿದ್ರೆ ಪಾಪ. ಅನ್ನದಾನ, ವಿದ್ಯಾದಾನ, ವಸ್ತ್ರದಾನ ಮತ್ತು ಸಂಸ್ಕಾರ ನೀಡುವುದು ಉಪಕಾರ. ಕೆಟ್ಟ ಮಾರ್ಗಗಳನ್ನ ಬಿಟ್ಟು ಮತ್ತು ಕೆಟ್ಟ ಅಭ್ಯಾಸಗಳಿಗೆ ಅಧಿನರಾಗದೇ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು.
ಮಾನವ ತಾನು ಮಾಡುವ ಕೆಲಸವನ್ನ ಜವಾಬ್ದಾರಿಗಳನ್ನ ಆತನೇ ಅತ್ಯಂತ ನಿಷ್ಠೆಯಿಂದ ಮಾಡಬೇಕು. ಭಗವಂತನ ಮತ್ತು ಗುರುಗಳ ವಿಷಯದಲ್ಲಿ ಅಪಾರ ನಂಬಿಕೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಮನುಷ್ಯನಿಗೆ ಜ್ಞಾನದ ಅವಶ್ಯಕತೆಯು ತುಂಬಾ ಮುಖ್ಯ. ಅಜ್ಞಾನದಿಂದ ಪಾಪಗಳನ್ನು ಮಾಡುತ್ತಾನೆ. ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಅದನ್ನು ಅನುಭವಿಸಬೇಕು. ಜನ್ಮಜನ್ಮಾಂತರಗಳಿಂದ ಇದ್ದಂತಹ ಪಾಪಗಳಿಂದಾಗಿ ನಾವು ಕರ್ಮಗಳನ್ನ ಅನುಭವಿಸುತ್ತಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಕಷ್ಟ-ಸುಖ ಬರುತ್ತದೆ. ಎಲ್ಲವನ್ನೂ ಸಮಚಿತ್ತರಾಗಿ ಎದುರಿಸಬೇಕು ಎಂದರು.