ಹಾಸನ: ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟಗೊಂಡು ದೊಡ್ಡ ದುರಂತ ಸಂಭವಿಸಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಈ ಹಿಂದೆಯೂ ದೇವ ಭೂಮಿಯಲ್ಲಿ ಪ್ರಕೃತಿ ಮುನಿಸಿಗೆ ನೂರಾರು ಜೀವಗಳು ಬಲಿಯಾಗಿದ್ದವು. ಇವೆಲ್ಲದಕ್ಕೆ ಪ್ರಕೃತಿಯ ಮಡಿಲಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ. ಮಿತಿ ಮೀರಿದ ಅಭಿವೃದ್ಧಿ ಕಾರ್ಯಗಳಿಂದ ಇಂತಹದ್ದೆ ದುರಂತ ರಾಜ್ಯದ ಮಲೆನಾಡು ಮತ್ತು ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಯಾವಾಗ ಬೇಕಾದರು ಸಂಭವಿಸಬಹುದು. ಆದರೆ, ಇದ್ಯಾವುದು ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ.
ಹಾಸನ ಜಿಲ್ಲೆಯ ಬಿಸಿಲೆ, ಶಿರಾಡಿ ಘಾಟ್ ಪಕ್ಕದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತಿ ವರ್ಷ ಗುಡ್ಡ, ಬೆಟ್ಟ ಕುಸಿತಗಳು ಸಂಭವಿಸುತ್ತಲೇ ಇವೆ. ಕಳೆದ ಮಳೆಗಾಲದಲ್ಲಿ ಹಾಸನದ ಶಿರಾಡಿ ಘಾಟ್ ರೈಲ್ವೆ ಹಳಿಯ ಬಳಿ ಗುಡ್ಡ ಕುಸಿದಿತ್ತು. ಜೊತೆಗೆ ಶಿರಾಡಿ ಘಾಟ್ನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲೂ ಗುಡ್ಡ ಕುಸಿದು ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿತ್ತು. ಇದಕ್ಕೆ ಕಾರಣ ಪಶ್ಚಿಮ ಘಟ್ಟದಲ್ಲಿ ಎಗ್ಗಿಲ್ಲದೆ ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನ ಹೊಳೆ ಮತ್ತು ಇತರ ಕಿರು ಜಲ ವಿದ್ಯುತ್ ಯೋಜನೆಗಳು ಎಂಬುವುದು ಪರಿಸರವಾದಿಗಳು ಮತ್ತು ಮಲೆನಾಡು ಭಾಗದ ಹೋರಾಟಗಾರರ ಆರೋಪ.
ಈಗಾಗಲೇ, ಸಾವಿರಾರು ಅಪರೂಪದ ವನ್ಯ ಜೀವಿಗಳು, ಔಷಧೀಯ ಸಸ್ಯಗಳ ತಾಣವಾಗಿರುವ ಪಶ್ಚಿಮ ಘಟ್ಟದ ಪ್ರಮುಖ ಭಾಗ ಶಿರಾಡಿ ಘಾಟ್ನಲ್ಲಿ ಬೆಂಗಳೂರು -ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗ ಹಾದು ಹೋಗಿವೆ. ಜೊತೆಗೆ 4 ರಿಂದ 5 ಕಿರು ಜಲ ವಿದ್ಯುತ್ ಯೋಜನೆಗಳೂ ಇವೆ. ಈ ಜಲವಿದ್ಯುತ್ ಯೋಜನೆಗಳು ಪ್ರಾರಂಭಿಸದಂತೆ ದೊಡ್ಡ ಹೋರಾಟಗಳು ಈ ಹಿಂದೆ ನಡೆದಿವೆ. ಆದರೆ, ಅವುಗಳನ್ನು ನಿಲ್ಲಿಸಲು ಆಗಲಿಲ್ಲ. ಸದ್ಯ, ಶಿರಾಡಿ ಘಾಟ್ನಲ್ಲಿ ಸಣ್ಣ, ಸಣ್ಣ ನೀರಿನ ಝರಿಗಳನ್ನೆಲ್ಲಾ ಎತ್ತಿನ ಹೊಳೆ ಯೋಜನೆಯ ಪಾತ್ರಕ್ಕೆ ಸೇರಿಸುವ ಕಾರ್ಯ ಅವ್ಯಾಹತವಾಗಿ ನಡಿಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಮಲೆನಾಡು ಜನಪರ ಹೋರಾಟಗಾರ ಕಿಶೋರ್.
ಹಿಮಾಲಯ ಪರ್ವತಕ್ಕಿಂತ ಪಶ್ಚಿಮ ಘಟ್ಟ ಗಟ್ಟಿ ಎಂದು ಹೇಳಿಕೊಂಡಿದ್ದ ವಿಜ್ಞಾನಿಗಳಿಗೆ, ಈಗ ಆ ಬಗ್ಗೆಯೂ ಚಿಂತಿಸುವ ಕಾಲ ಸನಿಹವಾಗಿದೆ. ಒಂದು ವೇಳೆ ಅಭಿವೃದ್ಧಿ ಹೆಸರಲ್ಲಿ ಮತ್ತೆ ಶಿರಾಡಿ ಘಾಟ್ ಸೇರಿದಂತೆ ಇದಕ್ಕೆ ಹೊಂದಿಕೊಂಡಿರುವ ಎತ್ತರದ ಪ್ರದೇಶಗಳನ್ನು ಬೇಕಾಬಿಟ್ಟಿ ಕೊರೆದರೆ, ಇದಕ್ಕೆ ಬೆಲೆ ತೆರಬೇಕಾದ ಕಾಲ ದೂರವಿಲ್ಲ ಎಂಬುವುದು ಪರಿಸರವಾದಿಗಳ ಆತಂಕವಾಗಿದೆ.