ಹಾಸನ: ತೆರಿಗೆ ಹಣ ದುರುಪಯೋಗ ಮಾಡಿದ ಹಿನ್ನೆಲೆ ಇಬ್ಬರು ಅಧಿಕಾರಿಗಳು ಅಮಾನತುಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮ ಪಂಚಾಯತ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರೇಗೌಡ ಮತ್ತು ಲೆಕ್ಕ ಸಹಾಯಕ ಸೋಮಣ್ಣ ಅಮಾನತುಗೊಂಡ ಅಧಿಕಾರಿಗಳು.
2018 ರಿಂದ 2021 ರವರೆಗೆ ಸಂಗ್ರಹದ ತೆರಿಗೆ ಹಣವನ್ನು ಕಾರ್ಯದರ್ಶಿಯಾಗಿರುವ ಹಿರೇಗೌಡ 62 ಸಾವಿರ ರೂಪಾಯಿಗಳನ್ನು ಹಾಗೂ ಲೆಕ್ಕ ಸಹಾಯಕ ಸೋಮಣ್ಣ 1.14 ಲಕ್ಷ ಹಣವನ್ನು ಬ್ಯಾಂಕಿಗೆ ಜಮಾ ಮಾಡದೆ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದರು ಎನ್ನಲಾಗ್ತಿದೆ. ಈ ಕುರಿತು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ದೂರು ನೀಡಿದ್ದರು.
ನೀಡಿದ ದೂರಿನ ಅನ್ವಯ ಮೇಲ್ನೋಟಕ್ಕೆ ಹಣ ದುರುಪಯೋಗ ಆಗಿರುವುದು ಸಾಬೀತಾಗಿದೆ. ಹೀಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957 ನಿಯಮ 10/1 ಡಿ ಅಡಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಇಬ್ಬರನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ. ಎಸ್. ಮಹೇಶ್ ಅಮಾನತು ಮಾಡಿ ಆದೇಶ ಹೊರಡಿಸಿದರು.