ಕೊಳ್ಳೇಗಾಲ: ಜಮೀನು ಉಳುವ ವಿಚಾರಕ್ಕಾಗಿ ದಾಯದಿಗಳ ನಡುವೆ ಜಗಳ ಉಂಟಾಗಿದ್ದು, ಎರಡು ಕುಟುಂಬದ ಸದಸ್ಯರು ಮಚ್ಚು, ದೊಣ್ಣೆಯಿಂದ ಹೊಡೆದಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಪುಟ್ಟಶೆಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಕೃಷ್ಣಶೆಟ್ಟಿ, ಭಾಗ್ಯಮ್ಮ, ಸೋಮ ಶೇಖರ್, ಹಾಗೂ ಮತ್ತೊಂದು ಗುಂಪಿನ ಚಂದ್ರಶೇಖರ್ ,ಶೋಭಾ, ನಾಗಭೂಷನ್, ಮಂಜು, ಇಂದ್ರಮ್ಮ ಅವರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಒಂದೇ ಕುಟುಂಬದ ಎರಡು ಗುಂಪುಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಈ ಕುಟುಂಬಗಳಿಗೆ ಗ್ರಾಮದಲ್ಲಿ ಒಂದು ಮುಕ್ಕಾಲು ಎಕರೆ ಪಿತ್ರಾರ್ಜಿತ ಜಮೀನಿದ್ದು, ಕೃಷ್ಣಶೆಟ್ಟಿ ಕುಟುಂಬದವವರು ಜಮೀನಿನಲ್ಲಿ ಉಳುಮೆ ಮಾಡಿಸಿದ್ದಕ್ಕಾಗಿ ಚಂದ್ರಶೇಖರ್ ಕುಟುಂಬದವರು ನಮಗೂ ಪಾಲಿದೆ ಎಂದು ತಕರಾರು ತೆಗೆದಿದ್ದಾರೆ. ಪ್ರಶ್ನಿಸಲು ಹೋದಾಗ ಪರಸ್ಪರ ಎರಡು ಕುಟುಂಬಗಳು ಮಚ್ಚು, ಬಡಿಗೆಗಳಿಂದ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕೆಲವರು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿರಿ: ಪೋಷಕರ ಆಸ್ತಿ ಬೇಡ ಎಂದು ಮುಚ್ಚಳಿಕೆ : ಸುಖಾಂತ್ಯ ಕಂಡಿತು ಗದಗ PSI ಮಗಳ ಲವ್ ಸ್ಟೋರಿ!
ಗಲಾಟೆಯಲ್ಲಿ ಚಂದ್ರು ಎಂಬುವರಿಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ ಹಾಗೂ ಮತ್ತೊಂದು ಗುಂಪಿನ ಕೃಷ್ಣಶೆಟ್ಟಿಗೂ ಗಭೀರ ಗಾಯಗಳಾಗಿದ್ದು, ಇವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.