ಹಾಸನ : ಸ್ನೇಹಿತನ ಅಂತ್ಯಕ್ರಿಯೆ ಮುಗಿಸಿ ವಾಪಸ್ ಆಗುವಾಗ ಟಿಪ್ಪರ್ ಹಾಗೂ ಆ್ಯಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.
ಸ್ನೇಹಿತನ ಅಂತ್ಯಕ್ರಿಯೆ ಮುಗಿಸಿ ಬರುವಾಗ ಅಪಘಾತ : ಆ್ಯಂಬುಲೆನ್ಸ್ ಚಾಲಕ ಕುಮಾರ್ (38) ಮತ್ತು ಶಶಿಧರ್ (36) ಮೃತ ದುರ್ದೈವಿಗಳು. ಅ.30ರ ಸಂಜೆ ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಹೊಳೆನರಸೀಪುರ ತಾಲೂಕಿನ ಗ್ರಾಮವೊಂದರ ನಿವಾಸಿ ಕಾರ್ ಚಾಲಕ ಮತ್ತು ಮಾಲೀಕ ಶಿವಮೂರ್ತಿ (40) ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು.
ಶಿವಮೂರ್ತಿ ಮೃತದೇಹವನ್ನು ಅವರ ಸ್ನೇಹಿತರಾದ ಕುಮಾರ್ ಹಾಗೂ ಶಶಿಧರ್ ಮರಣೋತ್ತರ ಪರೀಕ್ಷೆ ಮಾಡಿಸಿ, ತುರ್ತು ವಾಹನದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ರು. ಅ.31ರಂದು ಅಂತ್ಯಕ್ರಿಯೆ ಮುಗಿಸಿಕೊಂಡು ತಡರಾತ್ರಿ ವಾಪಸ್ ಹೊಳೆನರಸೀಪುರಕ್ಕೆ ಹೊರಟಿದ್ದರು.
ಈ ವೇಳೆ ಹೊಳೆನರಸೀಪುರ ಹೊರವಲಯದ ಕಪಿಲ ಗ್ಯಾಸ್ ಏಜೆನ್ಸಿ ಸಮೀಪ ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರೂ ಸಾವನ್ನಪ್ಪಿದ್ದಾರೆ.
ಆ್ಯಂಬುಲೆನ್ಸ್ನಲ್ಲಿದ್ದ ಇನ್ನುಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಶಿವಮೂರ್ತಿಯವರ ಅಂತ್ಯಸಂಸ್ಕಾರ ಮುಗಿಸಿಕೊಂಡು ಹಳ್ಳಿ ಮೈಸೂರು ಸಮೀಪದ ಮಂಗಳವಾಡಿ ಗ್ರಾಮದಿಂದ ತಡರಾತ್ರಿ ಹೊರಟಿದ್ದರು ಎನ್ನಲಾಗಿದೆ.
ಆ್ಯಂಬುಲೆನ್ಸ್ಗೆ ದಾಖಲಾತಿಯೇ ಇಲ್ಲ : ಪುರಸಭೆಯ ಶವ ಸಾಗಿಸುವ ವಾಹನಕ್ಕೆ ದಾಖಲಾತಿಗಳೇ ಇಲ್ಲವೆಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ವಾಹನ ವಿಮೆ ಮತ್ತು ಎಫ್‌ಸಿ ದಾಖಲಾತಿಗಳು ಇಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ. ಸ್ಥಳಕ್ಕೆ ಹೊಳೆನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಪುನೀತ್‌ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ