ಹಾಸನ : ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮನೆ ಮೇಲೆ ಮರ ಬಿದ್ದ ಪರಿಣಾಮ ಲಕ್ಷಾಂತರ ರೂ. ನಷ್ಟವಾಗಿದೆ, ಸೂಕ್ತ ಪರಿಹಾರದ ಜೊತೆ ಮರ ತೆರವುಗೊಳಿಸುವಂತೆ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ನಗರದ ಅರಸೀಕೆರೆ ರಸ್ತೆ, ಬಿ. ಕಾಟೀಹಳ್ಳಿ ಕೊಪ್ಪಲು ರಸ್ತೆ ಬಳಿ ಇರುವ ತಂಗ್ಯಮ್ಮ (75 ) ಎಂಬುವವರ ಮನೆ ಮೇಲೆ ಬೃಹತ್ ಮರವೊಂದು ಬಿದ್ದು 2 ಲಕ್ಷಕ್ಕೂ ಹೆಚ್ಚಿನ ಆಸ್ತಿ ಪಾಸ್ತಿ ನಷ್ಟವಾಗಿದೆ. ಏಪ್ರಿಲ್ 25 ರಂದು ಸುರಿದ ಬಾರಿ ಮಳೆ ಮತ್ತು ಗಾಳಿಗೆ ಮುಖ್ಯ ರಸ್ತೆಯಲ್ಲಿದ್ದ ಬೃಹತ್ ಮರವೊಂದು ವಾಸದ ಮನೆ ಮೇಲೆ ಉರುಳಿದೆ. ಇದರಿಂದ ಮನೆ ಬಹುತೇಕ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮರ ತೆರವುಗೊಳಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಮನವಿ ಸಲ್ಲಿಸಿದರೂ ಇದುವರೆಗೂ ಯಾರೂ ಬಂದು ನೋಡಿಲ್ಲ. ಜೊತೆಗೆ ಮರ ತೆರವುಗೊಳಿಸಿರುವುದಿಲ್ಲ ಎಂದು ದೂರಿದರು.
ಅರಸೀಕೆರೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರು ರಸ್ತೆ ಬದಿ ಇರುವ ಮರದ ಸುತ್ತ ಮಣ್ಣನ್ನು ತೆಗೆದ ಪರಿಣಾಮ ಮಳೆ ಗಾಳಿ ಬಂದಾಗ ಮರವು ಮನೆ ಮೇಲೆ ಉರುಳಿದೆ ಎಂದು ತಮಗಾದ ಅನ್ಯಾಯ ಹೇಳಿಕೊಂಡರು.