ಹಾಸನ: ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ಮಸೂದೆ-2019ಗೆ ತಮ್ಮ ಸಮ್ಮತಿಯಿಲ್ಲ ಎಂದು ಈ ಮಸೂದೆಯನ್ನು ಸಂಸತ್ತಿಗೆ ಮರು ಪರಿಶೀಲನೆಗೆ ಕಳುಹಿಸಿಕೊಡುವಂತೆ ಒತ್ತಾಯಿಸಿ ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯಿಂದ ಮಂಗಳಮುಖಿಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷ ಸಿ. ಅಶ್ವತ್ ಮಾತನಾಡಿ, 2019ರಲ್ಲಿ ರಾಜ್ಯಸಭೆಯಲ್ಲಿ ಟ್ರಾನ್ಸ್‌ಜಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣಾ ಮಸೂದೆ 2019ಅನ್ನು ಅನುಮೋದಿಸಲಾಗಿದೆ. 2018ರಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಷನಲ್ ಲೀಗಲ್ ಸರ್ವಿಸಸ್ ಅಥಾರಿಟಿ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಇದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಐತಿಹಾಸಿಕ ತೀರ್ಪಿನ ನಂತರ ಸರಣಿಗಳಲ್ಲಿ ರಚಿಸಲಾದ ಬಿಲ್‌ಗಳ ಪೈಕಿ ಇದು ನೂತನವಾದ ಮಸೂದೆ ಆಗಿದೆ ಎಂದರು.
2019ರ ಮಸೂದೆಯಲ್ಲಿ ತೃತೀಯ ಲಿಂಗಿಗಳ ಸಮುದಾಯದ ವಿಮರ್ಶೆಗಳನ್ನು ಹಾಗೂ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸುಗಳನ್ನು ಅದರಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದು ಸವೋಚ್ಛ ನ್ಯಾಯಾಲಯದ ತೀರ್ಪು. ಭಾರತದ ಸಂವಿಧಾನವು ಕೊಟ್ಟಿರುವ ಟ್ರಾನ್ಸ್ ಜಂಡರ್ ವ್ಯಕ್ತಿಗಳ ಸಮಾನತೆಯ ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿರುತ್ತದೆ. ಇದು ಟ್ರಾನ್ಸ್ ಜಂಡರ್ ವ್ಯಕ್ತಿಗಳ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡದೆ ಅವಕಾಶ ವಂಚಿತರನ್ನಾಗಿ ಮಾಡಿದೆ ಎಂದು ದೂರಿದರು.
ಹಕ್ಕೊತ್ತಾಯಗಳು: ರಾಷ್ಟ್ರಪತಿಗಳು ಈ ಮಸೂದೆಗೆ ಒಪ್ಪಿಗೆ ಸೂಚಿಸಬಾರದು ಮತ್ತು ಸಂಸತ್ತಿಗೆ ಮರು ಪರಿಶೀಲನೆಗೆ ಕಳುಹಿಸಬೇಕು ಹಾಗೂ ಈ ಮಸೂದೆಯನ್ನು ಸೆಲೆಕ್ಸ್ ಕಮಿಟಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.