ಸಕಲೇಶಪುರ (ಹಾಸನ): ತಮಿಳುನಾಡು ಮೂಲದ ಕಾರ್ಮಿಕರಿಗೆ ಅಂತಿಮ ಕ್ಷಣದಲ್ಲಿ ರೈಲು ಟಿಕೆಟ್ ದೊರಕದ ಕಾರಣ ಬಿಹಾರಕ್ಕೆ ಹೊರಟ ರೈಲೊಂದನ್ನು ಪಟ್ಟಣದ ರೈಲು ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರಿಲ್ಲದಿದ್ದರೂ ಸಹ ಚಾಲಕರ ವಿಶ್ರಾಂತಿಗಾಗಿ ಕೆಲ ನಿಮಿಷಗಳ ಕಾಲ ನಿಲುಗಡೆ ಮಾಡಲಾಯಿತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಸರಿಸುಮಾರು 50 ದಿನಗಳಿಂದ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅಂತರರಾಜ್ಯ ಕಾರ್ಮಿಕರನ್ನು ಬಿಹಾರ ರಾಜ್ಯಕ್ಕೆ ಕರೆದೊಯ್ಯಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬೆಂಗಳೂರು, ಆಂಧ್ರಪ್ರದೇಶ ಮಾರ್ಗವಾಗಿ ವಿಶೇಷ ರೈಲೊಂದನ್ನು ಸರ್ಕಾರ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ರೈಲು ನಿಲ್ದಾಣದಲ್ಲಿ ಚಾಲಕರ ವಿಶ್ರಾಂತಿಗಾಗಿ ಸುಮಾರು 5 ನಿಮಿಷಗಳ ಕಾಲ ನಿಲುಗಡೆ ಮಾಡಲಾಗಿತ್ತು.
ತಮಿಳುನಾಡು ಮೂಲದ 21 ಜನ ಕಾರ್ಮಿಕರನ್ನು ಈ ರೈಲು ಮುಖಾಂತರ ಬೆಂಗಳೂರಿಗೆ ಕಳುಹಿಸಿ ಬೆಂಗಳೂರಿನಿಂದ ತಮಿಳುನಾಡಿಗೆ ಕಳುಹಿಸಲು ತಾಲೂಕು ಆಡಳಿತ ಯೋಜಿಸಿತ್ತು. ಆದರೆ, ಅಂತಿಮ ಕ್ಷಣದಲ್ಲಿ ರೈಲು ಟಿಕೆಟ್ ದೊರಕದ ಕಾರಣ ಕಾರ್ಮಿಕರನ್ನು ರೈಲಿನಲ್ಲಿ ಕಳುಹಿಸುವ ಯೋಜನೆಯನ್ನು ಕೈಬಿಟ್ಟಿತು. ಇದರಿಂದಾಗಿ ಕಾರ್ಮಿಕರನ್ನು ಕಳುಹಿಸಿಕೊಡಲು ಕಾಯುತ್ತಿದ್ದ ಕೋವಿಡ್-19 ಟಾಸ್ಕ್ ಪೋರ್ಸ್ನ ಕೆಲ ಅಧಿಕಾರಿಗಳ ತಂಡ ರೈಲಿನಲ್ಲಿದ್ದ ಕಾರ್ಮಿಕರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಿತು.
ಸುಮಾರು 77 ಜನ ಹಿಡಿಯುವ ಒಂದು ಬೋಗಿಯಲ್ಲಿ 22 ಜನರಿಗೆ ಮಾತ್ರ ಸೀಟುಗಳನ್ನು ಮೀಸಲಿಡಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ರೈಲ್ವೆ ಪೊಲೀಸ್ ವತಿಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕಳೆದ ಹಲವು ದಿನಗಳ ನಂತರ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲು ಇದಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಮಿಕರು ಹಾಗೂ ಜನರ ಸ್ಥಳಾಂತರಕ್ಕಾಗಿ ಮತ್ತಷ್ಟು ಅಂತರರಾಜ್ಯ ರೈಲುಗಳು ಸಂಚರಿಸುವ ಸಾಧ್ಯತೆಗಳಿವೆ.
ಈ ಸಂಧರ್ಭದಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್, ತಾಲೂಕು ಆರೋಗ್ಯಾಧಿಕಾರಿ ಮಹೇಶ್, ತಾ.ಪಂ ಸದಸ್ಯ ಉದಯ್, ಬ್ಯಾಕರವಳ್ಳಿ ಗ್ರಾ.ಪಂ ಅಧ್ಯಕ್ಷ ವಿಜಯ್ ಹಾಜರಿದ್ದರು.