ಹಾಸನ: ಎಪಿಎಂಸಿ ಗೋಡೌನ್ನಿಂದ ಖಾಸಗಿಯವರ ಗೋಡೌನ್ಗೆ ಅಕ್ರಮವಾಗಿ ರಾಗಿಯನ್ನು ಸಾಗಿಸಿ ಅನ್ಲೋಡ್ ಮಾಡುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಗಂಡಸಿ ಎಪಿಎಂಸಿ ಸಂಗ್ರಹಣಾ ಮಳಿಗೆಗಳಿಂದ 400 ಚೀಲ ರಾಗಿ ವಶಪಡಿಸಿಕೊಳ್ಳುವಲ್ಲಿ ಅರಸೀಕೆರೆ ತಾಲೂಕು ಆಡಳಿತ ಯಶಸ್ವಿಯಾಗಿದ್ದು, ಸಾರ್ವಜನಿಕರು ಸಾಥ್ ನೀಡಿದ್ದಾರೆ. ಖಾಸಗಿ ಗೋಡೌನ್ನಲ್ಲಿ ಅನಧಿಕೃತವಾಗಿ ರಾಗಿ ಚೀಲಗಳನ್ನು ಅನ್ಲೋಡ್ ಮಾಡುವ ವೇಳೆ ಸಾರ್ವಜನಿಕರು ಪ್ರಶ್ನೆ ಮಾಡಲು ಮುಂದಾದಾಗ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ಗಳು ಲಾರಿಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಗಂಡಸಿ ಹ್ಯಾಂಡ್ ಪೋಸ್ಟ್ನಿಂದ ಗಂಡಸಿ ಗ್ರಾಮದಲ್ಲಿರುವ ಖಾಸಗಿಯವರ ಗೋಡೌನ್ಗೆ ಲಾರಿಯಲ್ಲಿ ಬಂದ ನಂತರ ಸುಮಾರು 400 ಚೀಲ ರಾಗಿಯನ್ನ ನಾಫೆಡ್‌ನಿಂದ ಖರೀದಿಸಿದ್ದು, ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡುವ ಮೂಲಕ ವಂಚನೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ರಾಗಿ ವಿಚಾರವಾಗಿ ಅಕ್ರಮ ಬಯಲಿಗೆಳೆಯಲು ಒತ್ತಾಯಿಸಿ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸುವಂತೆ ರೈತ ಮುಖಂಡರು ಮತ್ತು ಬಿಜೆಪಿ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.
ಅಕ್ರಮ ಹೇಗೆ ನಡೆಯುತ್ತೆ: ನಾಫೆಡ್ ಮೂಲಕ ರಾಗಿ ಖರೀದಿಸುವಾಗ ಪ್ರಈ 50 ಕೆಜಿಗೆ 300 ಗ್ರಾಂ ಹೆಚ್ಚು ಪಡೆಯುತ್ತಾರೆ. ಆದರೆ ಈ ಎಪಿಎಂಸಿಯಲ್ಲಿ ಮಾತ್ರ ರಾಗಿ ಖರೀದಿಸುವಾಗ 51 ಕೆಜಿ, 500 ಗ್ರಾಂ ರಾಗಿ ಪಡೆಯುತ್ತಾರೆ. ಆದರೆ ರೈತರಿಗೆ ಹಣ ಕೊಡುವುದು ಮಾತ್ರ 50 ಕೆಜಿಗೆ. ರೈತ ಪ್ರಶ್ನೆ ಮಾಡಿದರೆ ರಾಗಿಯಲ್ಲಿ ಕಲ್ಲಿದೆ., ಹುಳುಗಳಿವೆ, ಮೊಗ್ಗಲು ಬಂದಿದೆ ಎಂಬ ನಾನಾ ಕಾರಣಗಳನ್ನು ಹೇಳಿ ಖರೀದಿಸಲು ವಿಳಂಬ ಮಾಡುತ್ತಾರಂತೆ. ಹಾಗಾಗಿ ರೈತರು ಮರು ಮಾತನಾಡದೆ 1 ಕೆಜಿ ಅಲ್ಲವೇ ಎಂದು ಸುಮ್ಮನಾಗಿ ಬಿಡುತ್ತಾರೆ.
1 ಕೆಜಿ 300 ಗ್ರಾಂ ಹೆಚ್ಚುವರಿಯಾಗಿ ಪಡೆದ ರಾಗಿಯನ್ನು ಸರ್ಕಾರದ ಲೆಕ್ಕಕ್ಕೆ ಸೇರಿಸದೆ ಎಪಿಎಂಸಿಯಲ್ಲಿ ಅನಧಿಕೃತವಾಗಿ ಇರುವ ದಲ್ಲಾಳಿಗಳು ಮತ್ತು ಎಪಿಎಂಸಿ ಸಿಬ್ಬಂದಿ ಇಂತಹ ಹೆಚ್ಚುವರಿ ರಾಗಿಯನ್ನು ಸಂಗ್ರಹಣೆ ಮಾಡಿ, ಈಗ ಅದನ್ನ ಸರ್ಕಾರಿ ದಾಸ್ತಾನು ಮಳಿಗೆಯಿಂದ ಖಾಸಗಿ ದಾಸ್ತಾನು ಮಳಿಗೆಗೆ ಲಾರಿ ಮುಖಾಂತರ ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರ ಕಣ್ಣಿಗೆ ಬಿದ್ದ ಹಿನ್ನೆಲೆಯಲ್ಲಿ ಅಕ್ರಮ ಬಯಲಾಗಿದೆ. ರಾಗಿ ಅಷ್ಟೇ ಅಲ್ಲ ತೆಂಗಿನಕಾಯಿ ಖರೀದಿಸುವಾಗಲೂ ಸಾವಿರಕ್ಕೆ ಎರಡು ಕಾಯಿಯಂತೆ ದಲ್ಲಾಳಿಗೆ "ದೇವರ ಕಾಯಿ" ಅಂತ ಕೊಡಬೇಕು ಇದು ಇತ್ತೀಚೆಗೆ ನಡೆದುಕೊಂಡು ಬರುತ್ತಿರುವ ಅಕ್ರಮ ಪದ್ಧತಿಯಾಗಿದೆ.
ಗಂಡಸಿ ಎಪಿಎಂಸಿಯ ನಾಫೆಡ್‌ನಲ್ಲಿ ರೈತರಿಂದ 3 ಲಕ್ಷದ 85 ಸಾವಿರ ಕೆಜಿ ರಾಗಿಯನ್ನು ಪಡೆದಿದ್ದು, ಈ ಬಗ್ಗೆ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ ಉಗ್ರಾಣದಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ಅಂತಹ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಎಂ.ಜಿ.ನಾಗೇಶ್ ಮಾತನಾಡಿ , ನಕಲಿ ದಾಖಲೆಗಳನ್ನು ಗುರುತಿಸಿ ಎಪಿಎಂಸಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ರೈತರು ಹೇಳುತ್ತಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಲಾಗುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸದಲ್ಲಿದ್ದು ಖುದ್ದು ಪರಿಶೀಲನೆ ಮಾಡುವಂತೆ ಒತ್ತಡ ಹೇರಲಾಗುವುದು ಎಂದರು.
ಎಪಿಎಂಸಿಯಲ್ಲಿರುವ ಗೋಡೌನ್ಗೆ ಬೀಗಹಾಕಿ ಸೀಲ್ ಮಾಡಿ, ಕಡತಗಳನ್ನು ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಅಕ್ರಮದಲ್ಲಿ ಭಾಗಿಯಾಗಿರುವ ಉಗ್ರಾಣ ವ್ಯವಸ್ಥಾಪಕ ಧರ್ಮಲಿಂಗಯ್ಯ ಸೇರಿದಂತೆ ಒಟ್ಟು 4 ಜನರ ವಿರುದ್ಧ ದೂರು ನೀಡಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಸ್ಪಷ್ಟನೆ ನೀಡಿದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಗ್ರಾಮಸ್ಥರ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿ ರಾಗಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದಾರೆ ಎಂದು ಕಂಡು ಬಂದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸುವಂತೆ ತಿಳಿಸಿದರು.