ಹಾಸನ: ಪ್ರವಾಸೋದ್ಯಮ ಅಭಿವೃದ್ಧಿಗೆ ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ಆದಷ್ಟು ತ್ವರಿತವಾಗಿ ಮುಕ್ತಗೊಳಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಈವರೆಗಿನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಣ ಬಿಡುಗಡೆಯಾದರೂ ಹಲವು ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ, ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಎಚ್ಚರಿಸಿದರು.
ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕೇವಲ ಹಣ ವೆಚ್ಚ ಮಾಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶ ಈಡೇರದು. ಮಾಡುವ ಕಾಮಗಾರಿ ಜನೋಪಯೋಗಿ ಹಾಗೂ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.
ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಾಮಗಾರಿಗಳ ಚುರುಕಾಗಬೇಕು. ಹಳೇಬೀಡು ದೇವಾಲಯದ ಶೌಚಾಲಯ ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಮುಗಿಸಬೇಕು. ಬೇಲೂರು ತಾಲೂಕಿನ ವಿಷ್ಣುಸಮುದ್ರ ಕೆರೆಯಲ್ಲಿರುವ ಅಮೃತೇಶ್ವರ ಹಾಗೂ ಮಂಟಪಗಳ ಕಾಮಗಾರಿಯನ್ನು ಬೇಗ ಪ್ರಾರಂಭಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಶ್ವೇತಾ ದೇವರಾಜು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಅನುಕೂಲಗಳನ್ನು ಗಮನಿಸಿ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಡಿಸಿ ಆರ್.ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳವಾದ ಅವಕಾಶವಿದೆ. ಮಾಡುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಆಕರ್ಷಕವಾಗಿರಬೇಕು ಎಂದರಲ್ಲದೆ ಅನುಷ್ಠಾನ ಇಲಾಖೆಗಳು ಸ್ಥಳೀಯ ಜನಪ್ರತಿನಿಧಿಗಳೊಡನೆ ಚರ್ಚಿಸಿ ಕಾಮಗಾರಿ ನಡೆಸಬೇಕು. ಬೇಗ ಬೇಗ ಆಡಳಿತಾತ್ಮಕ ಅನುಮೋದನೆಗಳನ್ನು ಪಡೆದು ಕೆಲಸ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.
ನಗರದ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ವಿಹಾರಧಾಮ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಬೇಕು, ಇಲ್ಲವೇ ಮೂರನೇ ಸಂಸ್ಥೆಗೆ ನಿರ್ವಹಣೆಗೆ ವಹಿಸಿಕೊಡಬೇಕು ಎಂದರು. ಬೇಲೂರು-ಹಳೇಬೀಡು ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳು. ಹಾಗಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳು ಪರಸ್ವರ ಸಮನ್ವಯತೆ ಸಾಧಿಸಿ ಬೇಗ ಕೆಲಸ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಖರೀದಿಸಲು ನೀಡಲಾಗುವ ಸಹಾಯಧನಕ್ಕೆ ಈಗಾಗಲೇ ಅರ್ಜಿಗಳು ಬಂದಿದ್ದು, ಅರ್ಹ ಅಭ್ಯರ್ಥಿಗಳು ಹಾಗೂ ಬ್ಯಾಂಕ್ ವ್ಯವಸ್ಥಾಪಕರ ಸಭೆ ಏರ್ಪಡಿಸಿ ಶೀಘ್ರವೇ ಸೌಲಭ್ಯ ಒದಗಿಸಿ ಎಂದೂ ತಿಳಿಸಿದರು.
ವಿವಿಧ ತಾಲೂಕುಗಳ ಐತಿಹಾಸಿಕ ಹಾಗೂ ಧಾರ್ಮಿಕ ಮತ್ತು ಪ್ರಾಕೃತಿಕ ತಾಣಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು. ವಾರಾಂತ್ಯದಲ್ಲಿ ಸ್ಥಳೀಯ ಪ್ರವಾಸಿಗರು ಬಂದು ಪ್ರವಾಸಿ ತಾಣಗಳಲ್ಲಿ ಕಸ ಹಾಕುವುದು, ಬಾಟಲಿಗಳನ್ನು ಒಡೆಯುವುದು ಮಾಡುತ್ತಾರೆ. ಆದರೆ, ಆ ಆರೋಪವನ್ನು ಹೋಂ ಸ್ಟೇಗಳ ಮೇಲೆ ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ಭಾಗದ ಹೋಂ ಸ್ಟೇ ಮಾಲೀಕರು ಮನವಿ ಮಾಡಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಸಂಜಯ್ ಲೋಕೋಪಯೋಗಿ, ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್, ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.