ಹಾಸನ: ಕೋವಿಡ್-19 ಸೋಂಕು ಹರಡುವಿಕೆ ನಿಯಂತ್ರಿಸಲು ನಾಳೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಎಲ್ಲಾ ಅವಶ್ಯಕ ಸೇವೆ, ವಸ್ತುಗಳು ಹೊರತುಪಡಿಸಿ ವಾಹನ ಸಂಚಾರ ನಿಷೇಧಿಸಲಾಗಿದೆ. ನಿತ್ಯ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ನಾಳೆ ಪೂರ್ಣ ದಿನದ ಲಾಕ್ಡೌನ್ ಇರಲಿದೆ. ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದರು.
ಮದುವೆ ಸಮಾರಂಭಗಳು ಈ ಹಿಂದೆಯೇ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು ಗರಿಷ್ಠ ಅತಿಥಿಗಳ ಸಂಖ್ಯೆ 50ಕ್ಕೆ ಸೀಮಿತಗೊಳಿಸಿರಬೇಕು. ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಸರಳವಾಗಿ ಮದುವೆ ಸಮಾರಂಭ ನಡೆಸಲು ಅನುಮತಿಸಲಾಗಿದೆ ಎಂದು ಹೇಳಿದರು.
ಲಾಕ್ಡೌನ್ ಆವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಬಗೆಯ ಪರವಾನಗಿ ಇರುವ ಎಲ್ಲಾ ಮದ್ಯದ ಅಂಗಡಿಗಳನ್ನು ಪ್ರತಿ ಭಾನುವಾರದಂದು ಪೂರ್ಣ ದಿನ ಮುಚ್ಚಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ. ಅನಗತ್ಯವಾಗಿ ಓಡಾಡಿದವರು ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.