ಹಾಸನ :ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಸನದಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆಯೇ ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಎದುರು ಮುಖ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪುತ್ರ ಹೆಚ್.ಡಿ. ರೇವಣ್ಣರೊಂದಿಗೆ ಭೇಟಿ ನೀಡಿ ಸಹಸ್ರನಾಮ ಅರ್ಚನೆ ಮಾಡಿಸಿದರು. ಬಳಿಕ ಹುಟ್ಟೂರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ಭೇಟಿ ನೀಡಿದ ದೇವೇಗೌಡರು, ದೇವಾಲಯದಲ್ಲಿನ ನಾಮಪತ್ರವನ್ನು ದೇವರ ಸನ್ನಿಧಿಯಲ್ಲಿ ಇಟ್ಟು ವಿಶೇಷ ಪೂಜೆ ಮಾಡಿಸಿದರು.
ಅಂತಿಮವಾಗಿ ಮಾವಿನಕೆರೆಯ ಬೆಟ್ಟದ ರಂಗನಾಥ ಸ್ವಾಮಿದೇವಾಲಯಕ್ಕೆ ತೆರಳಿ ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ, ಮಂಡ್ಯದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ಜೊತೆಗಿದ್ದು, ಸಾಥ್ ನೀಡಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಗೌಡ್ರು ತೆರಳಿದರು. ಇವತ್ತು ತುಮಕೂರಿನಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸುವರು.
ಇನ್ನು ಇದೇ ವೇಳೆ ಮಾತನಾಡಿದ ಹೆಚ್.ಡಿ. ದೇವೇಗೌಡ, ಮಧ್ಯಾಹ್ನ ತುಮಕೂರಿನಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ. ಕಾಂಗ್ರೆಸ್ ನಾಯಕ ಪರಮೇಶ್ವರ ಹಾಗೂ ಇತರರೊಂದಿಗೆ ಚರ್ಚೆ ಮುಗಿದಿದೆ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಬಳಿಕ ನಾನು ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವೆ. ಬೆಂಗಳೂರು ಉತ್ತರ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿರೋ ವಿಚಾರ ಸಂಬಂಧ ಮಾತನಾಡಿದ ಗೌಡರು, ನಾವು ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಮುಂದೇ ನೋಡೋಣ ಎಂದರು.