ಹಾಸನ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗುರುವಾರ ಒಂದೇ ದಿನ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೂ ಒಟ್ಟು 312 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಗುಣಮುಖರಾಗಿ 236 ಜನರು ಮನೆಗೆ ವಾಪಸ್ ಹೋಗಿದ್ದಾರೆ. ಇನ್ನೂ 81 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ನಗರದಲ್ಲಿ 1, ಆಲೂರು ತಾಲೂಕಿನ 1 ಏರಿಯಾ ಸೇರಿ ಒಟ್ಟು 23 ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ ಎಂದರು.
ಓರ್ವ ಪೊಲೀಸ್ ಪೇದೆಯಿಂದ ಆರು ಜನರಿಗೆ ಕೊರೊನಾ ಸೋಂಕು ಹರಡಿದೆ. ಸೋಂಕಿತ ಪೇದೆಯಿಂದ ಕುಟುಂಬದಲ್ಲಿ ಐವರಿಗೆ ಹಾಗೂ ಪ್ರಾಥಮಿಕ ಸಂಪರ್ಕದಿಂದ ಕೆ.ಆರ್.ಪುರಂ ಪೊಲೀಸ್ ಠಾಣೆಯ ಮತ್ತೋರ್ವ ಪೊಲೀಸ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ರಜೆಯ ಮೇಲೆ ಊರಿಗೆ ಬಂದಿದ್ದ ಸೈನಿಕನಿಗೂ ಕೊರೊನಾ ತಗುಲಿದೆ. ನಗರದಲ್ಲಿ ಶುಂಠಿ ವ್ಯಾಪಾರ ಮಾಡುವ ಓರ್ವನಿಗೆ ಕೊರೊನಾ ಇದ್ದು, ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಬೆಳಕಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕೊರೊನಾ ಭೀತಿ ನಡುವೆ ಜಿಲ್ಲೆಯಲ್ಲಿ 89 ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗೆ 20,872 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 19,946 ವಿದ್ಯಾರ್ಥಿಗಳು ಹಾಜರಾಗಿದ್ದು, 926 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ತಿಳಿಸಿದರು.