ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಮೇಯಲು ಹೋಗಿದ್ದ ಹತ್ತಕ್ಕೂ ಹೆಚ್ಚು ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನಕ್ಕೆ ಒಂದು ಕಡೆ ಖುಷಿಯಾಗಿದ್ದರೆ ಮತ್ತೊಂದೆಡೆ ಸಂಕಷ್ಟವನ್ನೂ ಎದುರಿಸುವಂತಾಗಿದೆ. ಮಳೆ ಜೊತೆ ಗುಡುಗು-ಸಿಡಿಲಿನ ಆರ್ಭಟ ಜೋರಾಗಿದ್ದು, ಕೃಷಿ ಕೆಲಸ ಮಾಡಲು ಸಹ ರೈತರು ಭಯಪಡುತ್ತಿದ್ದಾರೆ. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಅರಕಲಗೂಡಿನಲ್ಲಿನಲ್ಲಿ ಈಗಾಗಲೇ ಸಾಕಷ್ಟು ಜಾನುವಾರುಗಳು ಸಾವಿಗೀಡಾಗಿವೆ. ಹಾಸನ ನಗರದಲ್ಲಿ ಕೂಡ ಸಿಡಿಲಿನ ಬಡಿತಕ್ಕೆ ಮರಗಳು ಧರೆಗುರುಳಿ ಕಾರುಗಳಿಗೆ ಸಾಕಷ್ಟು ಹಾನಿಯಾಗಿತ್ತು. ಅಷ್ಟೇ ಅಲ್ಲದೆ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು.
ಅದೇ ರೀತಿ ಅರಸೀಕೆರೆ ತಾಲೂಕಿನ ಸರಸೀಪುರದಲ್ಲಿ ಹತ್ತಾರು ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಕುರಿ ಮೇಯಿಸುತ್ತಿದ್ದ ಮಂಜುನಾಥ್ ಅದೃಷ್ಟವಶಾತ್ ಸಿಡಿಲಿನಿಂದ ಪಾರಾಗಿದ್ದಾರೆ. ಇನ್ನು ಈ ಪ್ರಕರಣದಿಂದ ಮಂಜುನಾಥ್ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಸರ್ಕಾರದಿಂದ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.