ಹಾಸನ : ಅಂಗಡಿಗಳಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 90 ಸಾವಿರ ರೂ. ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳುವಲ್ಲಿ ಸಕಲೇಶಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನ. 4 ರಂದು ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಗೋಪಿ ಅವರಿಗೆ ಲಭ್ಯವಾದ ಮಾಹಿತಿ ಮೇರೆಗೆ ಸಕಲೇಶಪುರ ನಗರ ಠಾಣಾ ವ್ಯಾಪ್ತಿಯ ದೋಣಿಗಾಲ್ ಬಳಿ (ಕೆಎ 04 ಎಎಫ್ 1247 ಸಂಖ್ಯೆ) ಕಾರಿನಲ್ಲಿ ಬರುತ್ತಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ಕ್ರಿಶ್ಚನ್ ಅಜಯ್ (45), ಆತನ ಪತ್ನಿ ಜಿ. ಶಾಂತಕುಮಾರಿ (50) ಹಾಗೂ ಅವರ ಪುತ್ರ ಥಾಮಸ್ (23) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಸಾಮಿಗಳು ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದು ಈ ವೇಳೆ ಡಿವೈಎಸ್‌ಪಿ ಮತ್ತು ಸಿಬ್ಬಂದಿ ಸತೀಶ, ಸುನಿಲ್, ಲೋಕೇಶ, ಪೃಥ್ವಿ, ರಮ್ಯ ಮತ್ತು ಚಾಲಕ ಅಶೋಕ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ರೂ. 2000, 500 ಹಾಗೂ 200 ಮುಖಬೆಲೆಯ ಒಟ್ಟು 77,000 ರೂ. ಖೋಟಾ ನೋಟುಗಳನ್ನು ಮತ್ತು ಆರೋಪಿತರು ಚಲಾವಣೆ ಮಾಡಿ ಸಂಗ್ರಹಿಸಿದ ಒಟ್ಟು 90 ಸಾವಿರ ರೂ. ನೈಜ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ಅವರು ಹೇಳಿದರು.
ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ವಿಶೇಷ ಬಹುಮಾನ ಘೋಷಿಸಿದರು.