ಹಾಸನ: ಈವರೆಗೂ ನಮ್ಮಲ್ಲಿ ಹಸಿರು ವಲಯವಿದೆ. ಆದರೆ, ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆ ಏನಾಗಬಹುದೆಂಬ ಆತಂಕವಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಕೊರೊನಾ ಕುರಿತ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಎಷ್ಟೇ ಬಿಗಿ ಬಂದೋಬಸ್ತ್ ಇದ್ದರೂ ಕೂಡ ಹೊರ ರಾಜ್ಯದಿಂದ ನಮ್ಮ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ 3 ರಿಂದ 4 ಸಾವಿರ ಮಂದಿ ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಅವರಿಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಾ ಎಂದು ಆರೋಗ್ಯ ಸಚಿವರನ್ನ ಪ್ರಶ್ನಿಸಿದ್ದಾರೆ.
ಬಳಿಕ ಮಾತನಾಡಿದ ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ, ನಮ್ಮ ತಾಲೂಕಿನಲ್ಲಿಯೂ ಕೊಡಗು- ಮಂಗಳೂರಿನಿಂದ ನುಸುಳುವವರು ಹೆಚ್ಚಾಗಿದ್ದಾರೆ. ಎಷ್ಟೇ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದರೂ ಕೂಡಾ ಅವುಗಳನ್ನ ರಾತ್ರೋರಾತ್ರಿ ತೆರವುಗೊಳಿಸಿ ಬರುತ್ತಿದ್ದಾರೆ. ಇದು ಜಿಲ್ಲೆಗೆ ಆತಂಕ ಸೃಷ್ಠಿ ಮಾಡುತ್ತಿದೆ. ಹಾಗಾಗಿ ಇದರ ಬಗ್ಗೆ ಸಚಿವರು ಗಮನ ಹರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.