ಅರಕಲಗೂಡು(ಹಾಸನ) : ಮನೆ ಕೆಲಸಕ್ಕೆಂದು ಸೇರಿಸಿಕೊಂಡರೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅರಕಲಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಲಗಪ್ಪ ವಿರೂಪಾಕ್ಷಪ್ಪ ವಡ್ಡರ್ (32) ಹಾಗೂ ಬಾಬುರಾವ್ ಚೌಹ್ಹಾಣ್ (40) ಬಂಧಿತರು. ಆರೋಪಿಗಳಿಂದ ಸುಮಾರು 2.75 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಏನು?
ಅರಕಲಗೂಡು ತಾಲ್ಲೂಕಿನ ರಂಗಪುರ ಗ್ರಾಮದ ಶಿವಲಿಂಗಯ್ಯ ಎಂಬವರ ಮನೆಗೆ ಹುಬ್ಬಳ್ಳಿ ಮೂಲದ ರಘು ಎಂಬುವವರು ಇಬ್ಬರು ವ್ಯಕ್ತಿಗಳನ್ನು ಫೆಬ್ರವರಿ 7ರಂದು ಕೆಲಸಕ್ಕೆ ಸೇರಿಸಿದ್ದರು. ಜೊತೆಗೆ ಮಾಲೀಕ ಶಿವಲಿಂಗಯ್ಯ ಮನೆಯ ಪಕ್ಕದಲ್ಲಿ ಪುಟ್ಟ ಮನೆಯೊಂದನ್ನು ಕೊಟ್ಟು ಜೊತೆಗೆ ಮಾತನಾಡಲು ಮೊಬೈಲ್ ಕೂಡ ಕೊಡಿಸಿದ್ದರಂತೆ. ಫೆಬ್ರವರಿ 23ರಂದು ಸಂಬಂಧಿಕರ ಮದುವೆಗೆಂದು ಶಿವಲಿಂಗಯ್ಯ ಮತ್ತು ಅವರ ಕುಟುಂಬ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಹೋಗಿದ್ದಾರೆ.
ಮದುವೆಗೆ ಹೋಗುವ ಮುನ್ನ ಮನೆಯನ್ನು ಜಾಗ್ರತೆಯಿಂದ ನೋಡಿಕೊಳ್ಳುವಂತೆ ಕೆಲಸಕ್ಕೆ ಸೇರಿದ್ದ ಹುಲಿಗೆಪ್ಪ ಮತ್ತು ಬಾಬುರಾವ್ ಎಂಬುವರಿಗೆ ಹೇಳಿ ಹೋಗಿದ್ದಾರೆ. ಕುಟುಂಬಸ್ಥರು ಮನೆಯಿಂದ ಹೊರ ಹೋಗುತ್ತಿದ್ದಂತೆ ಇಬ್ಬರು ಆರೋಪಿಗಳು ಮಾಲೀಕರ ಮನೆಗೆ ನುಗ್ಗಿ ಮನೆಯಲ್ಲಿದ್ದ 2.75 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಅರಕಲಗೂಡು ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.