ಹಾಸನ: ಸರ್ಕಾರವನ್ನ ಆರ್ಎಸ್ಎಸ್ ಕಂಟ್ರೋಲ್ ಮಾಡುವಂತಹ ಸ್ಥಿತಿ ಬಂದಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ಹಿಜಾಬ್-ಹಲಾಲ್ ವಿವಾದಗಳ ಹಿಂದೆ RSS ಇಲ್ಲ, ಕೆಲ ಹಿಂದೂ ಸಂಘಟನೆಗಳು ಇವೆ. ಅದನ್ನು ನಾವು ಇಲ್ಲ ಅನ್ನುವುದಿಲ್ಲ. ಮುತಾಲಿಕ್ ಹಾಗೂ ಬಜರಂಗದಳದವರು ಮಾತನಾಡಿದ್ರೆ ಆರ್.ಎಸ್.ಎಸ್ ಅನ್ನೋಕೆ ಆಗುತ್ತಾ? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಪ್ರಶ್ನಿಸಿದರು.
ರಾಜ್ಯದಲ್ಲಿ ಹಿಂದೂ-ಮುಸ್ಲಿಂ ವಿಚಾರವಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ನನ್ನ ದೃಷ್ಟಿಯಲ್ಲಿ ಇದೆಲ್ಲಾ ಅನಗತ್ಯ. ಒಂದು ಕಡೆ ಇದ್ದಾಗ ಹಾಗೆಲ್ಲಾ ಮಾಡೋಕೆ ಆಗುತ್ತಾ?, ಇದೆಲ್ಲ ತಪ್ಪು. ನಾವೆಲ್ಲಾ ಮನುಷ್ಯರು, ಒಂದೇ ದೇಶದಲ್ಲಿ ಬದುಕುತ್ತಿದ್ದೇವೆ. ಇದೆಲ್ಲ ವಿವಾದ ಮಾಡುವ ವಿಷಯಗಳಲ್ಲ. ಆದರೆ, ಏನೇನೋ ನಡೆಯುತ್ತಿದೆ. ನಾವು ಏನು ಹೇಳೋಕಾಗುತ್ತೆ?. ಹಿಂದೂ ಪರ ಸಂಘಟನೆಗಳ ಮಾವು, ಕ್ಯಾಬ್ ಬ್ಯಾನ್ ವಿವಾದಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನನಗೆ ಏನೂ ಮಾಹಿತಿ ಇಲ್ಲ. ಹೊಸಪೇಟೆ ಕಾರ್ಯಕಾರಿ ಸಭೆಯಲ್ಲಿ ಇದ್ಯಾವುದೂ ಚರ್ಚೆ ಆಗಲ್ಲ. ದೆಹಲಿ ಸಭೆಯಲ್ಲೂ ಇದ್ಯಾವುದು ಚರ್ಚೆ ಆಗಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಸರ್ವಪಕ್ಷ ಸಭೆ ನಡೆದಿತ್ತು. ಹಾಗಾಗಿ, ಅನುಮತಿ ಪಡೆಯಲು ಹೋಗೋಣ ಎಂದಿದ್ದರು. ನಾನು ಬ್ಯುಸಿ ಇದ್ದೆ, ಸಿಎಂ ಹೋಗಿ ಬಂದಿದ್ದಾರೆ. ಸೀರಿಯಸ್ ಮೀಟಿಂಗ್ ಆಗಲಿಲ್ಲ ಅನ್ನೋದು ನನಗಿರೋ ಮಾಹಿತಿ ಎಂದು ತಿಳಿಸಿದರು.
ಮೇಕೆದಾಟು ವಿಚಾರಕ್ಕೆ ತಮಿಳುನಾಡು ಬಿಜೆಪಿ ವಿರೋಧ ವಿಚಾರದ ಕುರಿತು ಪ್ರಸ್ತಾಪಿಸಿ, ಪಕ್ಷವಾಗಿ ಅವರ ರಾಜ್ಯದ ಹಿತದಿಂದ ಅವರು ಹಾಗೆ ಹೇಳ್ತಾರೆ. ಅವರಿಗೂ ಮೇಕೆದಾಟು ಯೋಜನೆಗೂ ಸಂಬಂಧವೇ ಇಲ್ಲ. ಇದು ನಮ್ಮ ರಾಜ್ಯದಲ್ಲಿದೆ, ನಮ್ಮ ಉಳಿಕೆ ನೀರಲ್ಲಿ ಯೋಜನೆ ಆಗುತ್ತದೆ. ನೀರಾವರಿಗೆ ಈ ಯೋಜನೆ ಬಳಸೋಲ್ಲ. ಕೇವಲ ಕುಡಿಯೋ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸುತ್ತೇವೆ. ಅವರಿಗೆ ನೀರು ಕೊರತೆ ಬಂದರೆ ನೀರು ಕೊಡಲು ಸಹಾಯ ಆಗುತ್ತೆ ಎಂದು ಅವರಿಗೆ ಮನವರಿಕೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ತುಮಿಳುನಾಡಿನವರಿಗೆ ಮನವರಿಕೆ ಆದಂತೆ ಕಾಣುತ್ತಿಲ್ಲ. ತಮಿಳುನಾಡಿನಲ್ಲಿ ರಾಜಕೀಯ ಮಾಡಬೇಕಾದರೆ ಈ ವಿಚಾರ ಬೇಕು. ಹಾಗಾಗಿ, ಇದನ್ನ ಇಟ್ಟುಕೊಂಡಿದ್ದಾರೆ. ಆದರೆ ಮೇಕೆದಾಟು ಯೋಜನೆಯಿಂದ ಅವರಿಗೆ ಯಾವುದೇ ಸಮಸ್ಯೆ ಆಗಲ್ಲ. ಬೆಂಗಳೂರಿಗೆ ಹೆಚ್ಚುವರಿ ನೀರು ಬೇಕು. ಹಾಗಾಗಿ, ನಾವು ಕುಡಿಯೋ ನೀರಿಗೆ ಯೋಜನೆ ಮಾಡಲೇಬೇಕು. ಅವರು ನಮ್ಮ ಯೋಜನೆಗೆ ತಕರಾರು ಮಾಡಿದರು. ನಾವು ಅವರ ಗುಂಡ್ಲಾ ಯೋಜನೆಗೆ ತಕರಾರು ಮಾಡಿದ್ದೀವಿ. ಅವರು ಹೀಗೆಯೇ ಮುಂದುವರಿದರೆ ಅವರ ಎಲ್ಲಾ ಯೋಜನೆಗೂ ನಾವು ತಕರಾರು ಮಾಡಬೇಕಾಗುತ್ತೆ ಎಂದು ಮಾಧುಸ್ವಾಮಿ ಅವರು ತಮಿಳುನಾಡಿಗೂ ವಾರ್ನಿಂಗ್ ರವಾನಿಸಿದರು.
ಇದನ್ನೂ ಓದಿ: ಮಹಿಳಾ ಸ್ವಸಹಾಯ ಸಂಘಗಳ ನೆರವಿಗೆ ಆ್ಯಂಕರ್ ಬ್ಯಾಂಕ್ ಸ್ಥಾಪನೆ: ಸಿಎಂ ಬೊಮ್ಮಾಯಿ