ಹಾಸನ: ತಂತ್ರಜ್ಞಾನದ ಜೊತೆ ಮುನ್ನುಗ್ಗುತ್ತಿರುವ ನಾವು, ವಿದ್ಯುತ್ ಕೈಕೊಟ್ಟರೂ ಕೃತಕ ಬೆಳಕು ಪಡೆಯುವ ತಂತ್ರಜ್ಞಾನದ ಜೊತೆ ಬದುಕುತ್ತಿದ್ದೇವೆ. ಆದ್ರೆ ಇನ್ನೂ ಇದೊಂದು ಗ್ರಾಮದ ಸುಮಾರು 10 ಕುಟುಂಬಗಳು ದೀಪದ ಕೆಳಗಿನ ಕತ್ತಲಿನಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ವಿದ್ಯುತ್ ಇಲ್ಲದೆ ಈ ಕುಟುಂಬಗಳು ಪರಿತಪಿಸುತ್ತಿವೆ.
ತಾಲೂಕಿನ ದುಮ್ಮಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡು ಕಳೆದ 20 ವರ್ಷಗಳಿಂದಲೂ ಜೀವನ ಸಾಗಿಸುತ್ತಿರುವ 10 ಕುಟುಂಬಗಳು, ವಿದ್ಯುತ್ ಸೌಲಭ್ಯವಿಲ್ಲದೇ ಸೀಮೆಎಣ್ಣೆ ಹಾಗೂ ಕ್ಯಾಂಡಲ್ ದೀಪದ ಬೆಳಕಿನಲ್ಲಿ ದಿನ ದೂಡುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಎಲ್ಲಾ ವರ್ಗದ ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೋಟಿ ಕೋಟಿ ಹಣ ಮೀಸಲಿರಿಸಿದೆ. ಅಲ್ಲದೆ ನಿರಂತರ ಜ್ಯೋತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಗ್ರಾಮೀಣ ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನೂ ಮಾಡಿದೆ. ಇಂತಹ ಸ್ಥಿತಿಯಲ್ಲಿಯೂ ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದ ಗೋಮಾಳದಲ್ಲಿ ವಾಸವಿರುವ 10 ದಲಿತ ಕುಟುಂಬಗಳು ಬೆಳಕಿನಿಂದ ವಂಚಿತವಾಗಿವೆ.
1991ರಲ್ಲಿ ನಮೂನೆ 53 ರಲ್ಲಿ ಗ್ರಾಮಸ್ಥರು ಬಗರ್ ಸಾಗುವಳಿ ಚೀಟಿಗೆ ಅರ್ಜಿ ಕೂಡ ಸಲ್ಲಿಸಿದ್ದಾರೆ. ಹೀಗಿದ್ದರೂ ಕೂಡ ಇನ್ನೂ ಮಂಜೂರಾತಿ ಪತ್ರ ದೊರೆತಿಲ್ಲ. ವಾಸವಿರುವ ಮನೆಗಳಿಗೆ ಸ್ಥಳೀಯ ಸಂತೆಮರೂರು ಗ್ರಾಪಂ ವತಿಯಿಂದ ಕುಡಿಯುವ ನೀರಿನ ನಲ್ಲಿಗಳು, ಚರಂಡಿ ಹಾಗೂ ರಸ್ತೆಯನ್ನು ಕಲ್ಪಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಮಾತ್ರ ಕಲ್ಪಿಸಿಲ್ಲ.
ದೂರದ ಮನೆಗಳನ್ನು ಅವಲಂಬಿಸಿರುವ ಕುಟುಂಬಗಳು
ಮೂಲ ದುಮ್ಮಿ ಕಾಲೋನಿಯಿಂದ ಅರ್ಧ ಕಿ.ಮೀ ದೂರದಲ್ಲಿರುವ 10 ಕುಟುಂಬಗಳು ದಿನನಿತ್ಯದ ಅಗತ್ಯತೆಯ ಪೂರೈಕೆಗೆ ತಮ್ಮ ನೆರೆಹೊರೆಯ ಮನೆಗಳನ್ನು ಅವಲಂಬಿಸಿದ್ದಾರೆ. ಗ್ರೈಂಡರ್, ಮಿಲ್ ಬಳಕೆ, ಟಿವಿ ನೋಡಲು, ಮಕ್ಕಳು ರಾತ್ರಿ ಓದಲು ಇತರರ ಮನೆಗೆ ತೆರಳುವಂತಾಗಿದೆ.
ಮನೆ ಬಳಿ ಹಾದುಹೋಗಿರುವ ವಿದ್ಯುತ್ ಲೈನ್
ಬಡ ಕುಟುಂಬಗಳು ಗ್ರಾಮದ ಪ್ರಮುಖ ರಸ್ತೆಯ ಪಕ್ಕದಲ್ಲಿಯೇ ವಾಸವಿದ್ದು, ರಸ್ತೆಯ ಎರಡು ಕಡೆ ವಿದ್ಯುತ್ ಲೈನ್ ಹಾದುಹೋಗಿದೆ. ಇದೇ ಮಾರ್ಗದಲ್ಲಿ ಮನೆ ಬಳಕೆ ವಿದ್ಯುತ್ ಲೈನ್ ಅಳವಡಿಸುವ ಅವಕಾಶವಿದೆ. ಈ ಕೆಲಸವನ್ನು ವಿದ್ಯುತ್ ಇಲಾಖೆ ಮಾಡದೇ ನಿರ್ಲಕ್ಷ್ಯತೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಸಂತೆಮರೂರು ಗ್ರಾ.ಪಂ ವತಿಯಿಂದ ನಡೆದ ಜನಸಂರ್ಪಕ ಸಭೆಯಲ್ಲಿ ಭಾಗವಹಿಸಿದ್ದ ಕ್ಷೇತ್ರದ ಶಾಸಕ ರಾಮಸ್ವಾಮಿ ಅವರಿಗೂ ಮನವಿ ನೀಡಿದಾಗ,ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ವಿದ್ಯುತ್ ಇಲಾಖೆ ಎಂಜಿನಿಯರ್‌ಗೆ ಮತ್ತು ಪಿಡಿಒಗೆ ಸೂಚನೆ ನೀಡಿದ್ದರು. ಎರಡೂವರೆ ವರ್ಷಗಳು ಕಳೆದರೂ ಕೂಡ ಒಬ್ಬ ಅಧಿಕಾರಿ ಕೂಡ ಭೇಟಿ ಕೊಟ್ಟಿಲ್ಲ ಎಂಬುದು ಗ್ರಾಮಸ್ಥರ ದೂರು.