ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿಯ 75 ಬಾಳ್ಳುಪೇಟೆ ಆಸುಪಾಸಿನಲ್ಲಿ ಅಂಗಡಿಗಳನ್ನು ಹಾಕಿಕೊಂಡು ರಸ್ತೆ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪಿಡಿಓ ಚುರುಕು ಮುಟ್ಟಿಸಿದರು.
ತಾಲೂಕಿನ ಬಾಳ್ಳುಪೇಟೆಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪ್ರಭಾ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಬೆಳ್ಳಂಬೆಳಗ್ಗೆ ಮೈಕ್ ಹಿಡಿದುಕೊಂಡು ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದರು.
ಕಳೆದ ಎರಡು ತಿಂಗಳ ಹಿಂದೆ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಸಮಯದಲ್ಲಿ ಸಂತೆಯನ್ನು ರದ್ದು ಮಾಡಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವ್ಯಾಪಾರಸ್ಥರು ಇಂದು ಸಂತೆ ದಿನವಾದ ಹಿನ್ನೆಲೆ ರಸ್ತೆಯಲ್ಲಿಯೇ ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಜನಸಂದಣಿ ಆಗುತ್ತಿತ್ತು. ಹೊರ ಜಿಲ್ಲೆ ತಾಲೂಕಿನಿಂದ ಈ ಗ್ರಾಮಕ್ಕೆ ಬರುವ ವರ್ತಕರಿಂದ ಕೊರೊನಾ ಹಬ್ಬುವ ಆತಂಕದಿಂದ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಹಲವು ದೂರುಗಳನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪಿಡಿಓ ಪ್ರಭಾ ಇಂದು ತಾವೇ ಸ್ವತಃ ಮೈಕ್ ಹಿಡಿದುಕೊಂಡು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು. ಲೈಸನ್ಸ್ ಇಲ್ಲದೆಯೇ ಕೆಲವು ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದು ಇದನ್ನು ಕೂಡಲೇ ನಿಲ್ಲಿಸುವಂತೆ ಪಿಡಿಓ ಆದೇಶ ನೀಡಿದರು. ಈ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಪಿಡಿಓ ನಡುವೆ ಮಾತಿನ ಜಟಾಪಟಿ ಏರ್ಪಟ್ಟಿತ್ತು. ಇನ್ನು ಮುಂದೆ ಲೈಸೆನ್ಸ್ ಇಲ್ಲದೆ ವ್ಯಾಪಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಹಾಗೂ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂಗಡಿ ಮುಂಭಾಗ ಸ್ಯಾನಿಟೈಸರ್ ಇಡಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ವಹಿವಾಟು ನಡೆಸಬೇಕು ಎಂದು ವರ್ತಕರಿಗೆ ಕಿವಿಮಾತು ಹೇಳಿದರು. ಮುಂಜಾನೆಯೇ ದಿಟ್ಟ ಕ್ರಮಕ್ಕೆ ಮುಂದಾದ ಪಿಡಿಓ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.