ಹಾಸನ: ತಮ್ಮ ನಿವಾಸದ ಮುಂದೆ ಉತ್ತಮವಾಗಿರುವ ರಸ್ತೆಯನ್ನು ಕಿತ್ತು ಹಾಕಿ ಹಣ ಮಾಡುವ ದಂಧೆ ಮಾಡುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಆರ್.ಸಿ ರಸ್ತೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡಿರುವ ನಿವಾಸದ ಮುಂದೆ ಸುಮಾರು 30 ಮೀಟರ್ ರಸ್ತೆಯನ್ನು ನಗರಸಭೆ ವತಿಯಿಂದ ಕಾಮಗಾರಿ ಮಾಡುತ್ತಿದ್ದಾರೆ. ಈ ರಸ್ತೆ ಉತ್ತಮವಾಗಿತ್ತು. ಆದರೂ ಕೂಡ ರಸ್ತೆ ಕಿತ್ತು ಕಾಮಗಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೇವಲ 30 ಮೀಟರ್ ರಸ್ತೆ ಕಿತ್ತು ಕಾಮಗಾರಿ ಆರಂಭಿಸುವ ಅವಶ್ಯಕತೆ ಏನಿತ್ತು. ಈ ಬಗ್ಗೆ ಕೂಡಲೇ ಅಧಿಕಾರಿಗಳು ಉತ್ತರ ನೀಡಬೇಕು. ಇಲ್ಲದಿದ್ದರೆ ಸ್ಥಳದಲ್ಲೇ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ತಮ್ಮ ನಿವಾಸದ ಸಮೀಪವೇ ಹದಗೆಟ್ಟಿದ್ದ ರಸ್ತೆ ಬಳಿಗೆ ಎಡಿಸಿ ಕವಿತಾ ರಾಜರಾಮ್ ಅವರನ್ನು ಕರೆದುಕೊಂಡು ಬಂದ ಅವರು, ಗುಂಡಿ ಬಿದ್ದಿರುವ ರಸ್ತೆ ಬಿಟ್ಟು ಉತ್ತಮವಾದ ರಸ್ತೆ ಕಾಮಗಾರಿ ಏಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.