ಬೇಲೂರು (ಹಾಸನ): ಮೂರು ದಿನದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಎರಡು ಗ್ರಾಮಗಳ ನಡುವಿನ ಸೇತುವೆ ಸಂಪರ್ಕ ಕಡಿತಗೊಂಡಿರೋ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಗೆಂಡೆಹಳ್ಳಿಯ ಸಮಿಪದ ಅಗಸರಹಳ್ಳಿ ಸಂಪರ್ಕ ಸೇತುವೆ ಮೇಲೆ ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ವಾಹನ ಹಾಗೂ ಜನ ಸಂಚಾರವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗಿದೆ. ಮಲೆನಾಡು ಭಾಗದಲ್ಲಿ ಎಡೆ ಬಿಡದೇ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರೈತರ ಬೆಳೆಯೂ ನೀರು ಪಾಲು: ಜಲಾಶಯದ ಹಿನ್ನೀರು ಹರಿದು ಬರುತ್ತಿರುವುದರಿಂದ ನೂರಾರು ಎಕರೆಯಷ್ಟು ಜಮೀನು ನೀರಿನಿಂದ ಮುಳುಗಡೆಯಾಗಿದೆ. ಕೆಲವು ಭಾಗದಲ್ಲಿ ಕಾಫಿ ತೋಟಕ್ಕೂ ನೀರು ನುಗ್ಗಿದೆ. ಕಟಾವು ಹಂತಕ್ಕೆ ತಲುಪಿದ್ದ ಭತ್ತ, ಜೋಳ, ಶುಂಠಿ, ಮೆಣಸಿಕನಕಾಯಿ ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.
ಬೇಲೂರು - ಸಕಲೇಶಪುರ ಹಾಗೂ ಬೇಲೂರು - ಮೂಡಿಗೆರೆ ಹೆದ್ದಾರಿಯ ಪಕ್ಕ ಇರುವ ಬಾರಿ ಗ್ರಾತದ ಮರಗಳು ಒಣಗಿದ್ದು ಧಾರಾಕಾರವಾಗಿ ಸುರಿಯುತ್ತಿರುವ ಗಾಳಿ - ಮಳೆಯಿಂದಾಗಿ ಬುಡಸಮೇತ ರಸ್ತೆಗೆ ಬೀಳುತ್ತಿದ್ದು, ವಾಹನಗಳಲ್ಲಿ ಪ್ರಯಾಣಿಸುತಿರುವವರು ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಈ ರಸ್ತೆಗಳಲ್ಲಿರುವ ಒಣಗಿದ ಮರಗಳು ಮತ್ತು ತುಂಬಾ ಹಳೆಯದಾದ ಮರಗಳನ್ನು ತೆರವು ಗೊಳಿಸಬೇಕಾಗಿದೆ.
ದಿವಂಗತ ವೈ.ಎನ್.ರುದ್ರೇಶ್ ಗೌಡ ಕಳ್ಳೇರಿ ಗ್ರಾಮ ಪಂಚಾಯತ್ಗೆ ಸೇರುವ ಎರಡು ಗ್ರಾಮಗಳ ಸಂಪರ್ಕ ಕಲ್ಪಿಸಲು ಸಲುವಾಗಿ ಹತ್ತು ಲಕ್ಷವನ್ನ ಅಂದಿನ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಿಡುಗಡೆ ಮಾಡಿಸಿಕೊಂಡು ಸೇತುವೆ ನಿರ್ಮಾಣ ಮಾಡಿದ್ದರು. ಆದರೆ, 2 ವರ್ಷಗಳ ಹಿಂದೆ ಸುರಿದ ಮಳೆಯಿಂದ ಮತ್ತೆ ಸೇತುವೆ ಕುಸಿದಿದ್ದರಿಂದ, ಹಾಲಿ ಶಾಸಕ ಕೆ.ಎಸ್.ಲಿಂಗೇಶ್ ಇದರ ದುರಸ್ತಿಗಾಗಿ 2 ಲಕ್ಷ ವ್ಯಚ್ಚದಲ್ಲಿ ಮರು ನಿರ್ಮಾಣ ಮಾಡಿಸಿದ್ದರು. ಆದರೆ, ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೆ ಸೇತುವೆ ಕೊಚ್ಚಿ ಹೋಗಿದೆ. ಹೀಗಾಗಿ ಕಳಪೆ ಕಾಮಗಾರಿ ಎಂಬುದು ಸ್ಪಷ್ಟವಾಗಿ ಕಾಣುತ್ತಿದ್ದು, ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.