ಹಾಸನ: ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಿ ಉತ್ತಮ ಬೆಲೆ ಸಿಗುವಂತೆ ವ್ಯವಸ್ಥೆ ಮಾಡದೆ ಸರ್ಕಾರ ಕಡೆಗಣಿಸಿದೆ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೀನಾಯ ಪರಿಸ್ಥಿತಿಯಲ್ಲಿಯೂ ಕೂಡಾ ರೈತರ ನೆರವಿಗೆ ಸರ್ಕಾರ ಸ್ಪಂದಿಸದೆ ಇರುವುದು ನಿಜಕ್ಕೂ ಖಂಡನೀಯ. ರೈತ ಬೆಳೆದ ಬೆಳೆ ಮತ್ತು ತರಕಾರಿ ಜಮೀನಿನಲ್ಲಿಯೇ ಕೊಳೆಯುತ್ತಿದ್ದರೂ ಕೂಡ ಸೂಕ್ತ ಮಾರುಕಟ್ಟೆ ಒದಗಿಸಿ ಉತ್ತಮ ಬೆಲೆ ಸಿಗುವಂತೆ ವ್ಯವಸ್ಥೆ ಮಾಡದೇ ಇರುವುದು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬೇಜವಾಬ್ದಾರಿ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಗದಿತ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಯಾವುದೇ ನಿರ್ಧಾರಗಳನ್ನು ಸರ್ಕಾರವು ತೆಗೆದುಕೊಳ್ಳದೆ ರೈತನನ್ನು ಮತ್ತೊಮ್ಮೆ ಸಂಕಟಕ್ಕೆ ಸಿಲುಕಿಸಿದೆ ಹಾಗೂ ಬಡವರ ನೋವಿಗೆ ಸ್ಪಂದಿಸದೆ ಕೇವಲ ಉಳ್ಳವರ ಪರವಾಗಿ ಕೆಲಸ ಮಾಡಿರುವುದು ನಿಜಕ್ಕೂ ಶೋಚನೀಯವಾಗಿದೆ ಎಂದು ದೂರಿದರು.
ಸಾಂಕ್ರಾಮಿಕ ರೋಗದ ವಿಚಾರವಾಗಿ ರೋಗವನ್ನು ನಿಯಂತ್ರಿಸಲು ಹಗಲಿರುಳು ಶ್ರಮಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ಪ್ರತಿಯೊಬ್ಬ ವೈದ್ಯ, ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೂ ಕೋಟಿ ನಮನಗಳನ್ನು ಸಲ್ಲಿಸುವುದಾಗಿ ತಿಳಿಸಿದರು.