ಶ್ರವಣಬೆಳಗೊಳ/ ಹಾಸನ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕಾರೊಂದು ನಾಲೆಗೆ ಬಿದ್ದು, ಚಾಲಕ ಸೇರಿದಂತೆ ಮತ್ತೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪ ನಡೆದಿದೆ.
ಶ್ರವಣಬೆಳಗೊಳ ಸಮೀಪದ ಎನ್.ಜಿ.ಕೊಪ್ಪಲು ಗ್ರಾಮದ ಸುದರ್ಶನ್ (29), ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ದೇವರಹಳ್ಳಿ ಕುಮಾರ್ (3) ಗಂಭೀರವಾಗಿ ಗಾಯಗೊಂಡವರು. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಗುರಿಗಾರನಹಳ್ಳಿ - ಆಲದಹಳ್ಳಿ ಮಧ್ಯೆಯಿರುವ ಹೇಮಾವತಿ ನಾಲೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದಿದ್ದು, ನೀರಿಲ್ಲದಿದ್ದರಿಂದ ಕಾರು ನುಜ್ಜು ಗುಜ್ಜಾಗಿದೆ.
ಇವರು ಶ್ರವಣಬೆಳಗೊಳ ಮಾರ್ಗವಾಗಿ ಕಿಕ್ಕೇರಿ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಅತೀವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದ ಕಾರು ನಿಯಂತ್ರಣ ತಪ್ಪಿದೆ ಎನ್ನುವುದು ಸ್ಥಳೀಯರ ಮಾತಾಗಿದೆ. ಗಾಯಾಳುಗಳನ್ನು ಶ್ರವಣಬೆಳಗೊಳ ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.