ಹಾಸನ: ನಾಯಿಯನ್ನು ನಂಬಿಕಸ್ಥ ಪ್ರಾಣಿ ಅಂತಾರೆ. ತನ್ನನ್ನು ಸಾಕಿದ ಯಜಮಾನನಿಗೆ ಏನೇ ತೊಂದರೆ ಉಂಟಾದರೂ ಅದನ್ನು ಎಚ್ಚರಿಸುವ ಬುದ್ಧಿವಂತ ಶ್ವಾನಗಳೂ ನಮ್ಮಲ್ಲಿವೆ ಎನ್ನುವುದಕ್ಕೆ ಹಾಸನದಲ್ಲಿ ನಡೆದ ಘಟನೆಯೇ ಸಾಕ್ಷಿ.
ನಗರದ ಹೇಮಾವತಿ ಬಡಾವಣೆಯ ಮನೆಯೊಂದರಲ್ಲಿ ಹಾವು ಕಾಣಿಸಿಕೊಂಡಿದೆ. ಇದನ್ನು ಕಂಡ ಆ ಮನೆಯ ನಾಯಿ ಬೊಗಳಲು ಶುರು ಮಾಡಿದೆ. ನಿರಂತರವಾಗಿ ಬೊಗಳುತ್ತಿದ್ದ ನಾಯಿಯನ್ನು ಪರಿಶೀಲಿದಾಗ ಅದರ ಎದುರುಗಡೆ ಹಾವೊಂದು ಹೆಡೆ ಎತ್ತಿಕೊಂಡು ನಿಂತಿದ್ದನ್ನು ಮನೆಯ ಮಾಲೀಕರು ನೋಡಿದ್ದಾರೆ.
ಹಾವನ್ನು ಕಂಡು ಮನೆಯವರು ಹೌಹಾರಿದ್ದಾರೆ. ದೊಡ್ಡ ನಾಗರಹಾವೊಂದು ಮನೆಗೆ ಬಂದಿದ್ದು, ಮನೆಯಲ್ಲಿ ಮಕ್ಕಳು, ಹಿರಿಯರು ಇದ್ದಾರೆ. ಅವರಿಗೆ ಹಾವು ಹಾನಿ ಮಾಡುವುದನ್ನು ನಾಯಿ ತಪ್ಪಿಸಿದೆ. ಬಳಿಕ ಹಾವುಗಳನ್ನು ಹಿಡಿಯುವ ಸ್ನೇಕ್ ಶೇಷಣ್ಣ ಎಂಬುವವರಿಗೆ ಕರೆ ಮಾಡಿ ಹಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ಮನೆಗೆ ಬಂದ ಸ್ನೇಕ್ ಶೇಷಣ್ಣ ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಹಾವಿನಿಂದ ಸಂಭವಿಸಬಹುದಾದ ಅಪಾಯವನ್ನು ಬೊಗಳಿ ತಪ್ಪಿಸಿದ್ದಕ್ಕೆ ಮನೆಯವರೆಲ್ಲರೂ ತಮ್ಮ ನಾಯಿಯ ಕರ್ತವ್ಯ ಪ್ರಜ್ಞೆಯನ್ನು ಹೊಗಳಿದ್ದಾರೆ.