ಹಾಸನ: ಇತ್ತೀಚೆಗೆ ನಿಧನರಾದ ಕವಿ, ನಾಟಕಕಾರ, ಶಿಕ್ಷಕ, ಪ್ರಾಧ್ಯಾಪಕ ಹಾಗೂ ಬಂಡಾಯ ಸಾಹಿತಿಯಾಗಿ ಗಮನ ಸೆಳೆದಿದ್ದ ಡಾ. ಚೆನ್ನಣ್ಣ ವಾಲೀಕಾರಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಡಾ. ಚೆನ್ನಣ್ಣ ವಾಲೀಕಾರ 1943ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಂಕರವಾಡಿಯಲ್ಲಿ ಜನಿಸಿದರು. ತಂದೆ ಧಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ, ಪಿಹೆಚ್‌ಡಿ ಪಡೆದ ಇವರು, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಹೊಸಗನ್ನಡ ಸಾಹಿತ್ಯ, ದಲಿತ-ಬಂಡಾಯ, ಮಹಿಳಾ ಸಾಹಿತ್ಯ ಎಂಬ ವಿವಿಧ ದೃಷ್ಠಿಕೋನಗಳಲ್ಲಿ ಬೆಳೆದು ಬಂದಿದ್ದರು. ದಲಿತರ ಬದುಕಿನ ಶೋಷಣೆ, ನೋವುಗಳನ್ನು ತಮ್ಮ ಬರಹಗಳಲ್ಲಿ ಪ್ರತಿಬಿಂಬಿಸುತ್ತಿದ್ದರು. ಸ್ವಾತಂತ್ರ್ಯ ಬಂದರೂ ನಮ್ಮ ಬದುಕು ಇನ್ನೂ ಬದಲಾಗಲಿಲ್ಲ ಎಂಬ ನೋವುಗಳನನ್ನು ಸಾಹಿತ್ಯದ ಮೂಲಕ ತೋಡಿಕೊಂಡಿದ್ದರು.
ದಲಿತ-ಬಂಡಾಯದ ಹಿನ್ನೆಲೆಯಲ್ಲಿ ಮರದ ನೀರಿನ ಗಾಳಿ, ಪ್ಯಾಂಥರ್ಸ್ ಪದ್ಯಗಳು, ಧಿಕ್ಕಾರದ ಹಾಡುಗಳು ಎಂಬ ಕವನ ಸಂಕಲಗಳನ್ನು ರಚಿಸಿದ್ದಾರೆ. ಕಪ್ಪು ಕಥೆಗಳು, ಹೆಪ್ಪುಗಟ್ಟಿದ ಸಮುದ್ರ, ಕುತ್ತದಲ್ಲಿ ಕುದ್ದವರ ಕಥೆಗಳು ಎಂಬ ಕಥಾ ಸಂಕಲನಗಳು, ವ್ಯೋಮ ಸುನೀತಂಗಳ ಸುಖಾವ್ಯಾಮೃತ ಎಂಬ ಮಹಾಕಾವ್ಯ, ಟೊಂಕದ ಕೆಳಗಿನ ಜನ, ನರಭಕ್ಷಕ ರಾಜನ ಕಥೆ, ತಲೆ ಹಾಕುವವರು ಎಂಬ ನಾಟಕಗಳೊಂದಿಗೆ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು.