ಹಾಸನ: ಹೊಳೆನರಸಿಪುರ ಪಟ್ಟಣದ ಹೇಮಾವತಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ.
ಯಾಸಿನ್‌ನಗರ, ಕೆಎನ್‌ಎ ಬಡಾವಣೆಯಲ್ಲಿ 50 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆಯಿದ್ದು, ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಆಶ್ರಯ ಕೇಂದ್ರ ಅಥವಾ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಲ್ಲಿನ ನಿವಾಸಿಗಳಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪಟ್ಟಣದೊಳಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಇಂದು ಬೆಳಗ್ಗೆ 5 ಕ್ಕೂ ಹೆಚ್ಚು ಮನೆಗಳು ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿವೆ.
ಸ್ಥಳೀಯರು ಸುರಕ್ಷಿತ ಕೇಂದ್ರ ಹಾಗೂ ಗಂಜಿ ಕೇಂದ್ರಗಳಿಗೆ ತೆರಳಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ಸ್ಥಳಕ್ಕೆ ತಹಶಿಲ್ದಾರ್ ಕೆ.ಆರ್. ಶ್ರೀನಿವಾಸ್, ತಾ.ಪಂ. ಇಒ ಯೋಗೇಶ್, ಪುರಸಭಾ ಮುಖ್ಯಾಧಿಕಾರಿ ಬಸವರಾಜು ಕೂಡ ಈ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.