ಹಾಸನ: ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಸಂಭವಿಸಬಹುದಾಗಿದ್ದ ಬಹುದೊಡ್ಡ ದುರಂತ ತಪ್ಪಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಚಪ್ಪಾಳೆ, ಶಿಳ್ಳೆ ಹೊಡೆದ ಶಬ್ದಕ್ಕೆ ಎತ್ತುಗಳು ಬೆಚ್ಚಿದವು.
ಬೆದರಿ ಹೊಲದ ಬದುವಿನ ಹತ್ತಿರ ಬಂದಾಗ ಎತ್ತಿನಗಾಡಿ ಸುಮಾರು ಐದು ಅಡಿ ಮೇಲಕ್ಕೆ ಹಾರಿ ಬಿದ್ದಿದೆ. ಜೊತೆಗೆ ಎತ್ತಿನಗಾಡಿ ಓಡಿಸುತ್ತಿದ್ದ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ. ಆಗ ಬಂಡಿಯನ್ನು ಎತ್ತುಗಳು ಎಳೆದೊಯ್ದವು. ಈ ಘಟನೆ ಸಂಭವಿಸಿದ ಬಳಿಕ ತಕ್ಷಣ ಎಚ್ಚೆತ್ತ ಜನರು ಗಾಡಿ ಮತ್ತು ಎತ್ತುಗಳನ್ನ ಹಿಡಿದರು. ಮೇಲಕ್ಕೆ ಹಾರಿದ ಎತ್ತಿನ ಗಾಡಿ ಓಡಿಸುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುಗಾದಿ ಬಳಿಕ ಇಂತಹ ಗ್ರಾಮೀಣ ಕ್ರೀಡೆಗಳು ನಡೆಯುವುದು ಸಾಮಾನ್ಯ. ಅದರಲ್ಲಿ ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಕೂಡ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎತ್ತಿನ ಗಾಡಿ ಓಟದ ಸ್ಪರ್ಧೆ ಏರ್ಪಡಿಸಿದ್ದ ವೇಳೆ ಈ ಅವಘಡ ನಡೆದಿದೆ.