ಹಾಸನ: ರಾಜ್ಯದಲ್ಲಿ 'ಪರ್ಸಂಟೇಜ್' ಸರ್ಕಾರ ಆರಂಭಿಸಿದ್ದು ಬಿಜೆಪಿ ಸರ್ಕಾರ ಎಂದು ಸಚಿವ ಹೆಚ್.ಡಿ ರೇವಣ್ಣ ಆರೋಪಿಸಿದರು.
ರಾಜ್ಯದಲ್ಲಿ 20 ಪರ್ಸಂಟ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದರು. ಇದೇ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ರೇವಣ್ಣ, ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ಹಾಗೂ ಪರ್ಸಂಟೇಜ್ ವ್ಯವಹಾರ ಪ್ರಾರಂಭಿಸಿದ್ದು ನಾವಲ್ಲ, ಅದು ಬಿಜೆಪಿ ಸರ್ಕಾರ. ಕೆಲವು ಕೆಲಸಗಳನ್ನ ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಯಡಿಯೂರಪ್ಪ ಹೇಳಿದವರಿಗೆ ಕೊಡಿಸಿದ್ದೇನೆ. ಹಾಗಿದ್ದರೆ, ಅವರ ಬಳಿಯಿಂದ ಈ ನಾಯಕರು ಪರ್ಸೆಂಟೇಜ್ ತೆಗದುಕೊಂಡಿರಬೇಕು. ಅಂತಹ ಕೆಲಸಗಳನ್ನು ಮಾಡಿ ಜೈಲಿಗೆ ಹೋಗಿ ಬಂದಿರುವವರು ನಾವಲ್ಲ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಚುಚ್ಚಿದರು.
'ಬಿಜೆಪಿಯಿಂದ IT ಇಲಾಖೆ ದುರ್ಬಳಕೆ':
ಈ ಚುನಾವಣೆಯಲ್ಲಿ ಬಿಜೆಪಿ ಸ್ವಾಯತ್ತ ಸಂಸ್ಥೆ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ತರಕಾರಿ ಮಾರುವ ವ್ಯಕ್ತಿಯಿಂದ ಹಿಡಿದು, ರಾಜಕೀಯ ಮುಖಂಡರು ಹಾಗೂ ಅರ್ಚಕರ ಮನೆ ಮೇಲೆಲ್ಲಾ ತೆರಿಗೆ ಅಧಿಕಾರಿಗಳ ಮೂಲಕ ದಾಳಿ ಮಾಡಿಸಿದ್ದಾರೆ. ನನ್ನ ಪಿಎ ರಘು ಎಂಬಾತ ಮನೆಯಿಂದ ಪಕ್ಕದ ಥಿಯೇಟರ್ ಬಳಿ ವಿಶ್ರಾಂತಿಗೆ ಹೋಗುತ್ತಿದ್ದಾಗ ಆತನನ್ನೂ ಹಿಡಿದು ಬಳಿಯಿದ್ದ 60 ಸಾವಿರ ರೂಪಾಯಿ ಹಣ ವಶಪಡಿಸಿಕೊಂಡು, ವಾಹನದಲ್ಲೇ ಇರಿಸಿ ಫೋಟೋ ತೆಗೆಯುವ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಆರೋಪಿಸಿದರು.
ಹಾಸನ, ಮಂಡ್ಯ, ತುಮಕೂರಿನಲ್ಲೂ ಗೆಲುವು ನಮ್ಮದೇ:
ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲಿ ಮೈತ್ರಿ ಪಕ್ಷ ನಿಶ್ಚಿತವಾಗಿ ಗೆಲ್ಲಲಿದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವರು. ರಾಜ್ಯದ 8 ಲೋಕಸಭಾ ಕ್ಷೇತ್ರಗಳಲ್ಲೂ ನಾವು ಮುನ್ನಡೆ ಕಾಯ್ದುಕೊಳ್ಳುತ್ತೇವೆ ಎಂದು ರೇವಣ್ಣ ಭರವಸೆ ವ್ಯಕ್ತಪಡಿಸಿದರು.