ಹಾಸನ : ಊಟದ ವ್ಯವಸ್ಥೆಯ ವಿಚಾರವಾಗಿ ಶಾಸಕ ಶಿವಲಿಂಗೇಗೌಡ ಹಾಗೂ ಹಿಮ್ಸ್ ನಿರ್ದೇಶಕ ರವಿಕುಮಾರ್ ನಡುವೆ ಮಾತಿನ ಚಕಮಕಿ ಏರ್ಪಟ್ಟ ಘಟನೆ ನಡೆದಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಸಭೆ ಬಳಿಕ ವೈದ್ಯಕೀಯ ಸಚಿವರಾದ ಡಾ. ಸುಧಾಕರ್, ಮಾಧುಸ್ವಾಮಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಜಿಲ್ಲೆಯ ಶಾಸಕರುಗಳಿಗೆ ಮತ್ತೊಂದು ಕಡೆಗೆ ಊಟದ ವ್ಯವಸ್ಥೆ ಮಾಡಿರುವುದಕ್ಕೆ ಶಿವಲಿಂಗೇಗೌಡ ಗರಂ ಆಗಿದ್ದರು. ಸಚಿವರ ಹಿಂದೆ ಹೋಗುತ್ತಿದ್ದ ಶಾಸಕ ಶಿವಲಿಂಗೇಗೌಡರನ್ನು ತಡೆದು ಹಿಮ್ಸ್ ಸಿಬ್ಬಂದಿ ನಿಮಗೆ ಹಿಮ್ಸ್‌ನಲ್ಲಿ ಊಟದ ವ್ಯವಸ್ಥೆ ಎಂದು ಹೇಳಿದರು.
ನಾವೇನು ಜನಪ್ರತಿನಿಧಿಗಳಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಲಿಂಗೇಗೌಡರು, ನಿಮ್ಮ ಇಲಾಖೆ ಸಚಿವರು ಅಂತಾ ಹೀಗೆ ಮಾಡಿದ್ದೀರಾ ಎಂದು ಹಿಮ್ಸ್ ನಿರ್ದೇಶಕ ರವಿಕುಮಾರ್ ವಿರುದ್ಧ ಹರಿಹಾಯ್ದರು. ಈ ವೇಳೆ ಡಾ. ರವಿಕುಮಾರ್ ಮತ್ತು ಶಿವಲಿಂಗೇಗೌಡರ ನಡುವೆ ಏಕ ವಚನದಲ್ಲಿ ಮಾತಿನ ಚಕಮಕಿ ನಡೆಯಿತು.
ನೀನ್ಯಾವ ಸೀಮೆ ಡೈರೆಕ್ಟರ್, ಊಟದ ವ್ಯವಸ್ಥೆ ಮಾಡಿದ ಮೇಲೆ ಒಟ್ಟಿಗೆ ವ್ಯವಸ್ಥೆ ಮಾಡಬೇಕು. ಜನಪ್ರತಿನಿಧಿಗಳಲ್ಲಿ ಬೇಧಭಾವ ಮಾಡ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಾಸನ ಜಿಪಂ ಸಿಇಒ ಪರಮೇಶ್ ಹಿಮ್ಸ್ ನಿರ್ದೇಶಕ ರವಿಕುಮಾರ್ ಅವರನ್ನ ಎಳೆದುಕೊಂಡು ಹೋದರು.
ಆಕ್ರೋಶಗೊಂಡ ಶಾಸಕ ಬಾಲಕೃಷ್ಣ, ಶಿವಲಿಂಗೇಗೌಡ, ಎಮ್ಎಲ್ಸಿ ಗೋಪಾಲಸ್ವಾಮಿ ನೇರವಾಗಿ ಕಾರು ಹತ್ತಿ ತೆರಳಿದರು.