ಹಾಸನ: ಜಿಲ್ಲೆಯಾದ್ಯಂತ ಕೊರೊನಾ ವೈರಸ್ ನಿಯಂತ್ರಣ ಕುರಿತು ವ್ಯವಸ್ಥಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಭಯ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ರಚಿಸಲಾಗಿದೆ, ಜಿಲ್ಲಾ ಮಟ್ಟದ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಸಮಿತಿಯು ಈ ಬಗ್ಗೆ ಜಾಗೃತಿ ವಹಿಸಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಜಾಗೃತಿಗಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. 08172-246575 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಫ್ರಾನ್ಸ್‌ನಿಂದ ಫೆ.23 ರಂದು ಆಗಮಿಸಿದ ಜಿಲ್ಲೆಯ ವ್ಯಕ್ತಿಯೊಬ್ಬರು ಜ್ವರದಿಂದ ಬಳಲುತ್ತಿದ್ದು, ಅವರ ಕಫ್ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ಈವರೆಗೂ ಯಾವುದೇ ಖಚಿತ ಪ್ರಕರಣಗಳು ವರದಿಯಾಗಿಲ್ಲ, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಎಲ್ಲಾ ಬಸ್ ನಿಲ್ದಾಣ ಹಾಗೂ ಬಸ್‌ಗಳನ್ನು ಸ್ವಚ್ಛವಾಗಿಡಲು ಸೂಚಿಸಲಾಗಿದೆ. ಶಾಲೆಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕೈ ತೊಳೆದುಕೊಳ್ಳುವ ಬಗ್ಗೆ ಹಾಗೂ ವೈದ್ಯಾಧಿಕಾರಿಗಳು ಶಾಲೆಗಳಿಗೆ ತೆರಳಿ ಮಾಹಿತಿ ನೀಡಲು ಸೂಚಿಸಲಾಗಿದೆ. ಹಾಸನ ವೈದ್ಯಕೀಯ ಆಸ್ಪತ್ರೆಯಲ್ಲಿ 10 ಬೆಡ್, ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಚಿಕಿತ್ಸಾ ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ‘ರ‍್ಯಾಪಿಡ್ ರೆಸ್ಪಾನ್ಸ್ ಟೀಂ’ ರಚಿಸಲಾಗಿದೆ, ಹೋಟೆಲ್‌ಗಳಿಗೆ ಆಗಮಿಸುವ ವಿದೇಶಿಯರ ಬಗ್ಗೆ ನಿಗಾ ವಹಿಸಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಲು ಹಾಗೂ ಪ್ರತಿದಿನ ಈ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿ ಇನ್ಟ್ರಾರೆಡ್ ಥರ್ಮಾ ಮೀಟರ್ ಮೂಲಕ ತಪಾಸಣೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ವಿದೇಶದಿಂದ ಜಿಲ್ಲೆಗೆ ಆಗಮಿಸಿರುವ ನಾಲ್ವರ ಬಗ್ಗೆ ನಿಗಾ ವಹಿಸಲು ರಾಜ್ಯ ಕಣ್ಗಾವಲು ಸಮಿತಿ ಸೂಚಿಸಿದ್ದು, ಅದರಲ್ಲಿ ಒಬ್ಬರು ವಿದೇಶಕ್ಕೆ ವಾಪಸ್ಸಾಗಿದ್ದಾರೆ. ಇನ್ನೊಬ್ಬರು 28 ದಿನಗಳ ವೀಕ್ಷಣಾ ಅವಧಿ ಪೂರ್ಣಗೊಳಿಸಿ ಆರೋಗ್ಯವಾಗಿದ್ದಾರೆ. ಇನ್ನೂ ಇಬ್ಬರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿನಿತ್ಯ ಗಮನಿಸಲಾಗುತ್ತಿದ್ದು, ಅವಧಿ ಪೂರ್ಣ ಗೊಳಿಸಲು ಕಾಯಲಾಗುತ್ತಿದೆ ಎಂದು ಹೇಳಿದರು.