ಹಾಸನ: ನಗರದ ಹೊರವಲಯದಲ್ಲಿರುವ ಸತ್ಯಮಂಗಲ ಕೆರೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿದ್ಯಾರ್ಥಿನಿವೋರ್ವಳ ಮೃತದೇಹ ಪತ್ತೆಯಾಗಿದೆ.
ಈಕೆ 19 ವರ್ಷ ವಯಸ್ಸಿನವಳಾಗಿದ್ದು, ಹಾಸನದ ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಅರಕಲಗೂಡು ತಾಲೂಕಿನ ವಂಡರಹಳ್ಳಿ ಗ್ರಾಮದವಳು ಎನ್ನಲಾಗ್ತಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೈಮೇಲೆ, ಮುಖ ಹಾಗೂ ತುಟಿಯ ಮೇಲ್ಭಾಗದಲ್ಲಿ ಕೆಲವು ಗಾಯದ ಗುರುತುಗಳು ಕಂಡು ಬಂದಿವೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.