ಹಾಸನ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಂಭವಿಸಿರುವ ಹಾನಿ ಬಗ್ಗೆ ಸದಸ್ಯರು ಮತ್ತು ಅಧಿಕಾರಿಗಳನ್ನೊಳಗೊಂಡ ಅಧ್ಯಯನ ತಂಡ ಸಮೀಕ್ಷೆ ನಡೆಸಿ, ವರದಿ ಸಹಿತ ಸರ್ಕಾರದ ಬಳಿ ನಿಯೋಗ ತೆರಳಿ ಹೆಚ್ಚಿನ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಂಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆಯನ್ನು ಅಧ್ಯಕ್ಷೆ ಶ್ವೇತಾ ದೇವರಾಜ್ ವಹಿಸಿದ್ದರು. ಅತಿವೃಷ್ಟಿ ಹಾನಿ ಸಂಬಂಧ ಚರ್ಚಿಸಲು ತುರ್ತು ಸಭೆ ಕರೆಯದಿರುವ ಸಂಬಂಧ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಕಲೇಶಪುರ ತಾಲೂಕು ಯಸಳೂರು ಮತ್ತಿತರ ಭಾಗದಲ್ಲಿ ಮಳೆಯಿಂದ ಭೂ ಕುಸಿತ ಉಂಟಾಗಿ, ಕಾಫಿತೋಟಗಳು, ರಸ್ತೆಗಳು ಹಾಳಾಗಿವೆ. ಇದರಿಂದ ಸಾರ್ವಜನಿಕರು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಹಾನಿ ವೀಕ್ಷಣೆಗೆ ಬರುವ ಐದು ನಿಮಿಷದ ಮುಂಚೆ ನನಗೆ ಕರೆ ಮಾಡಿ ತಿಳಿಸುತ್ತಾರೆ ಎಂದು ಅಧ್ಯಕ್ಷೆ ಶ್ವೇತಾ ದೇವರಾಜ್ ವಿರುದ್ಧ ಸದಸ್ಯೆ ಉಜ್ಮರಿಜ್ವಿ ಅಸಮಾಧಾನ ವ್ಯಕ್ತಪಡಿಸಿದರು.
6 ತಾಲೂಕುಗಳಲ್ಲಿ ಅಪಾರ ಹಾನಿ ಸಂಭವಿಸಿದ್ದು, ಈ ಬಗ್ಗೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಶಾಸಕರು, ಸದಸ್ಯರು ಒತ್ತಾಯಿಸಿದರು.
ನೆರೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಶೀಘ್ರದಲ್ಲೇ ಸದಸ್ಯರೊಂದಿಗೆ ತೆರಳಿ ಅಧಿಕಾರಿಗಳಿಂದಲೂ ಮಾಹಿತಿ ಸ್ವೀಕರಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸೋಣ ಎಂದು ಅಧ್ಯಕ್ಷೆ ಶ್ವೇತಾ ದೇವರಾಜ್ ಹೇಳಿದ್ರು.
ಅಧ್ಯಕ್ಷರು ಹಲವು ಬಾರಿ ಭೇಟಿ ನೀಡಿದ್ದರೂ, ನನಗೆ ಮಾಹಿತಿ ನೀಡುತ್ತಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂಬ ಕನಿಷ್ಠ ಸೌಜನ್ಯ ಬೇಕಲ್ಲವೇ ಎಂದು ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸದಸ್ಯ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಯಾವ ಸದಸ್ಯರಿಗೂ ತಾರತಮ್ಯ ಎಸಗಿಲ್ಲ. ಸುಮ್ಮನೇ ಆರೋಪ ಮಾಡುವುದು ಸರಿಯಲ್ಲವೆಂದು ತಿರುಗೇಟು ನೀಡಿದ್ರು.