ಹಾಸನ: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ಕೊಡಲು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಸ್ಟೂಡೆಂಟ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದು, ಟಿಸಿ ಕೊಡಲ್ಲ ಎಂದು ನಾವು ಹೇಳಿಯೇ ಇಲ್ಲ; ಇದೆಲ್ಲವೂ ಕಾಲೇಜು ಬಿಟ್ಟು ಹೋದ ಮಾಜಿ ಪ್ರಾಂಶುಪಾಲ ಮುರಳಿ ಎಂಬುವರ ಕಿತಾಪತಿಯಾಗಿದೆ ಎಂದು ಪ್ರತ್ಯಾರೋಪ ಮಾಡಿದರು.
ಆರಂಭದಲ್ಲಿ ಟಿಸಿಗೆ ಬೇಡಿಕೆ ಮಂಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ನಗರದ ರಿಂಗ್ ರಸ್ತೆ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಎದುರು ಇರುವ ಸ್ಟೂಡೆಂಟ್ ಪಿಯು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ವಿಷಯ ತಿಳಿದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸಂಘಟನೆಯವರು ವಿದ್ಯಾರ್ಥಿಗಳ ಪರ ಬಂದು ಅವರೂ ಸಹ ಪ್ರತಿಭಟನೆಗೆ ಮುಂದಾದಾಗ ಕಾಲೇಜು ಆಡಳಿತ ಮಂಡಳಿಗೂ ಈ ಸಂಘಟನೆಯ ನಡುವೆ ಮಾತಿನ ಚಕಮಕಿ ನಡೆಯಿತು.
ಕಾಲೇಜು ಮತ್ತು ವಿದ್ಯಾರ್ಥಿಗಳ ನಡುವಣ ಸಮಸ್ಯೆಗೆ ಮೂರನೆಯವರು ಮೂಗು ತೂರಿಸುವ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ಕಾರ್ಯದರ್ಶಿ ಮನೋಹರ್ ತರಾಟೆಗೆ ತೆಗೆದುಕೊಂಡರು. ಈ ಎಲ್ಲ ಗೋಜಲುಗಳ ನಡುವೆ ಸ್ವಲ್ಪ ಹೊತ್ತು ಕಾಲೇಜು ಬಳಿ ಪರಸ್ಪರ ಮಾತಿನ ಚಕಮಕಿ, ಗೌಜು, ಗದ್ದಲದ ವಾತಾವರಣ ಉಂಟಾಗಿತ್ತು. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಂತಿಮವಾಗಿ ಕಾಲೇಜು ಆಡಳಿತ ಮಂಡಳಿಯವರು ಟಿಸಿ ಕೊಡಲು ಒಪ್ಪಿಕೊಂಡ ಪರಿಣಾಮ ವಿವಾದ ಅಂತ್ಯಗೊಂಡಿತು.