ಸಕಲೇಶಪುರ : ಕಾಡಾನೆ ಸಮಸ್ಯೆ ಬಗೆಹರಿಸಲು ಅರಣ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಮಳೆ ಕಡಿಮೆ ಆದ ಕೂಡಲೇ ರೈಲು ಹಳಿಗಳ ಪಕ್ಕ ಕಂಬಿ ಅಳವಡಿಸುವ ಕೆಲಸ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಶಿವರಾಂ ಬಾಬು ಹೇಳಿದರು.
ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಅಸ್ತಿಕ ಭಟ್ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ ನಂತರ ಪಟ್ಟಣದ ತಾಲೂಕು ಉಪ ಅರಣ್ಯ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿ ಜತೆ ಸಭೆ ನಡೆಸಿದರು.
ಅರಣ್ಯ ಇಲಾಖೆ ಕೈಗೊಂಡ ಕಠಿಣ ಕ್ರಮದಿಂದ ಕಳೆದ 2 ವರ್ಷಗಳಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ, ನಿನ್ನೆ (ಸೆ.1) ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವುದು ದುರದೃಷ್ಟಕರ. ನಮ್ಮ ವ್ಯಾಪ್ತಿಯಲ್ಲಿ ಆಗುವಂತಹ ಪ್ರತಿಭಟನಾಕಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂದು ಶಿವರಾಂ ಬಾಬು ಭರವಸೆ ನೀಡಿದರು.
ಮೃತ ಅಸ್ತಿಕ ಭಟ್ ಅವರ ಮಗಳಿಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಆದರೆ, ಕೆಲ ಬೇಡಿಕೆಗಳನ್ನು ನಾವು ಈಡೇರಿಸಲು ಸಾಧ್ಯವಾಗುವುದಿಲ್ಲ. ನಾಲ್ಕು ಕಾಡಾನೆಗಳಿಗೆ ಕಾಲರ್ ಐಡಿ ಹಾಕಲು ಅನುಮತಿ ಸಿಕ್ಕಿದೆ. ಅತಿ ಶೀಘ್ರವಾಗಿ ಕಾಲರ್ ಐಡಿ ಹಾಕಲಾಗುವುದು. ರೈಲು ಹಳಿಗಳಿಗೆ ಕಂಬಿಗಳನ್ನು ಅಳವಡಿಸುವ ಕಾರ್ಯಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ ಎಂದರು.
ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡುವುದು ಕಷ್ಟ. ಆದರೆ, ಸರ್ಕಾರದ ಅನುಮತಿ ಪಡೆದು ಕೆಲವು ಆನೆಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಆನೆ ಕಾರಿಡಾರ್ ಯೋಜನೆಗೆ ಸರ್ಕಾರದ ಅನುಮತಿ ಅಗತ್ಯ ಎಂದರು. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಇದ್ದರು.