ಹಾಸನ: ರಾಕ್ಷಸನಂತೆ ವರ್ತಿಸಿದ ನಾಯಿಯೊಂದು ಏಕಕಾಲದಲ್ಲಿ ಬರೋಬ್ಬರಿ 50 ಜನರಿಗೆ ಕಚ್ಚಿದ ಘಟನೆ ಹಾಸನ ನಗರ ಸಮೀಪದ ತಣ್ಣೀರುಹಳ್ಳದಲ್ಲಿ ನಿನ್ನೆ ನಡೆದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ಹಾಸನ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದಾರಿಯಲ್ಲಿ ನಡೆದಾಡುವವರು ಮತ್ತು ದ್ವಿಚಕ್ರ ವಾಹನದಲ್ಲಿ ಚಲಿಸುವವರು ಪ್ರತಿನಿತ್ಯ ಭಯದಿಂದಲೇ ಸಂಚರಿಸಬೇಕಾದ ವಾತಾವರಣ ಸೃಷ್ಟಿಯಾಗಿದೆ.
ತಣ್ಣೀರುಹಳ್ಳದ ಬಳಿ ನಾಯಿಯೊಂದು ರಾಕ್ಷಸನ ರೀತಿಯಲ್ಲಿ ವರ್ತಿಸಿ ಬರೋಬ್ಬರಿ 50 ಜನರಿಗೆ ಕಚ್ಚಿ ಗಾಯಗೊಳಿಸಿದ್ದು, ಕೊನೆಗೆ ಆ ನಾಯಿಯನ್ನು ಸಾರ್ವಜನಿಕರು ಸಾಯಿಸಿದ್ದಾರೆ. ಗಾಯಗೊಂಡವರನ್ನು ತಕ್ಷಣ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಹಿಂದೆ ನಗರಸಭೆಯು ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಇಂಜೆಕ್ಷನ್ ನೀಡಲಾಗಿತ್ತು. ಆದ್ರೆ ಅದು ಫಲಕಾರಿಯಾಗಲಿಲ್ಲ. ಇನ್ನು ನಾಯಿಗಳನ್ನು ಸಾಯಿಸಲು ಹೋದರೆ ರಕ್ಷಕ ಸಮಿತಿಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಮತ್ತು ನಗರಸಭೆ ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಮೂಲಕ ನೆಮ್ಮದಿಯ ಜೀವನಕ್ಕೆ ಕಾರಣಕರ್ತರಾಗುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.