ಹಾಸನ: ಶಾಲೆ ಮುಗಿಸಿ ವಾಪಸ್ ಬರುವಾಗ ಶಿಕ್ಷಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹಾಸನ ತಾಲೂಕಿನಲ್ಲಿ ನಡೆದಿದೆ.
ಹಾಸನ ತಾಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಶಾಲೆಯ ಶಕುಂತಲಾ ಗಂಭೀರವಾಗಿ ಗಾಯಗೊಂಡ ಶಿಕ್ಷಕಿ. ಇಂದು ಬೆಳಗ್ಗೆ ಶಾಲೆಗೆ ಹೋದ ಶಿಕ್ಷಕಿ ಸಂಜೆ ವೀರಪುರ ಮತ್ತು ಸೀಗೆ ಗ್ರಾಮದ ನಡುವಿನ ಕೆರೆಯ ಏರಿಯ ಮೇಲೆ ನಡೆದುಕೊಂಡು ಬರುವಾಗ ಏಕಾಏಕಿ ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ. ಮಹಿಳೆ ಕಿರುಚಾಡುವುದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೀದಿ ನಾಯಿಗಳಿಂದ ಶಿಕ್ಷಕಿಯನ್ನ ರಕ್ಷಣೆ ಮಾಡಿದ್ದಾರೆ. ಅವರನ್ನು ತಕ್ಷಣ ತುರ್ತು ವಾಹನದಲ್ಲಿ ಹಾಸನದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮದ್ಯವ್ಯಸನಿಗಳು ರಾತ್ರಿ ಸಂದರ್ಭದಲ್ಲಿ ಮದ್ಯಪಾನ ಸೇವಿಸಿ, ಮಾಂಸಾಹಾರ ತಿಂದು ಬಿಸಾಕಿದ ಆಹಾರವನ್ನು ತಿನ್ನಲು ಬರುತ್ತಿದ್ದ ನಾಯಿಗಳು ಈಗ ಮನುಷ್ಯನನ್ನು ಗಂಭೀರವಾಗಿ ಗಾಯ ಮಾಡಿರುವುದು ಸ್ಥಳೀಯರಿಗೆ ಆತಂಕ ಸೃಷ್ಟಿಸಿದೆ. ಇದಲ್ಲದೇ ಸೋಮವಾರದಿಂದ ಶಾಲೆ ಪ್ರಾರಂಭವಾಗುತ್ತಿರುವ ಹಿನ್ನೆಲೆ, ಮಕ್ಕಳನ್ನು ಈ ದಾರಿಯಲ್ಲಿ ಕಳಿಸುವುದು ಹೇಗಪ್ಪಾ ಎಂಬ ಆತಂಕದಲ್ಲಿ ಪೋಷಕರಿದ್ದಾರೆ. ತಕ್ಷಣ ಈ ನಾಯಿಗಳನ್ನು ಸ್ಥಳಾಂತರಿಸಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.