ಹಾಸನ: ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ನಗರದ ಸಾಲಗಾಮೆ ರಸ್ತೆ ಹಾಗೂ ಬೇಲೂರು ರಸ್ತೆ ಸಂಪರ್ಕಿಸುವ ರಿಂಗ್ ರಸ್ತೆಯ ಎರಡನೇ ಹಂತದ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ನಗರ ವ್ಯಾಪ್ತಿಯ ರಿಂಗ್ ರಸ್ತೆಯು 4.70 ಕಿ.ಮೀ.ನಿಂದ 7 ಕಿಲೋ ಮೀಟರ್ವರೆಗೂ ಎರಡು ಬದಿ ಕಾಂಕ್ರೀಟ್ ಚರಂಡಿ ನಿರ್ಮಾಣ ಹಾಗೂ 6.37 ಕಿ.ಮೀ.ನಿಂದ 7 ಕಿ.ಮೀ.ವರೆಗೂ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ನಗರ ಅಭಿವೃದ್ಧಿಯಾಗಬೇಕು ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಯಬೇಕು ಅಂದರೆ ಬೇಲೂರು ರಸ್ತೆಗೆ ಸಂಪರ್ಕಿಸುವ ರಿಂಗ್ ರಸ್ತೆ ಪೂರ್ಣಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯವಾಗಿತ್ತು.
ಉದ್ದೂರು ಗ್ರಾಮದ ಭೂಮಿ ಮಾಲೀಕರಿಗೆ ಪರಿಹಾರ ಕೊಡುವ ಜವಬ್ದಾರಿಯನ್ನ ತೆಗೆದುಕೊಂಡು ಅಭಿವೃದ್ಧಿ ಪರ ಕೆಲಸ ಮಾಡುವುದಕ್ಕೆ ನಿರ್ಧಾರ ತೆಗೆದುಕೊಂಡಿದ್ದೇನೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ರೈತರಿಗೆ ಪರಿಹಾರ ಕೊಡಲು ತೀರ್ಮಾನಿಸಿದ್ದೇನೆ. ಶೀಘ್ರದಲ್ಲಿಯೇ ಪರಿಹಾರ ಕೊಟ್ಟು ಕಾಮಗಾರಿಯನ್ನೂ ಜೊತೆ ಜೊತೆಯಲ್ಲೇ ಮಾಡಲಾಗುವುದು ಎಂದು ಭರವಸೆ ನೀಡಿದ್ರು.