ಹಾಸನ: ಕಳೆದ ರಾತ್ರಿ ರಕ್ಷಣೆಗಾಗಿ ಆರೋಪಿ ಮೇಲೆ ಫೈರಿಂಗ್ ಮಾಡುವಾಗ ಗಾಯಗೊಂಡು ಹಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ಸ್ಪೆಕ್ಟರನ್ನು ದಕ್ಷಿಣ ವಲಯ ಐಜಿ ವಿಫುಲ್ ಕುಮಾರ್ ಭೇಟಿ ಮಾಡಿ ವಿಚಾರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನರಾಯಪಟ್ಟಣದಲ್ಲಿ ಎರಡು ದಿನಗಳ ಹಿಂದೆ ಆಲಗೊಂಡನಹಳ್ಳಿ ಜೋಡಿ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸುವ ವೇಳೆ ಆತ ಪ್ರತಿದಾಳಿ ನಡೆಸಲು ಮುಂದಾದಾಗ ಏರ್ ಫೈರಿಂಗ್ ಮಾಡಿದ್ದಾರೆ. ಆದರೂ ಆತ ದಾಳಿ ನಡೆಸಿದ್ದಾನೆ. ಈ ವೇಳೆ ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದಾರೆ ಎಂದರು.
ವೃದ್ಧ ದಂಪತಿ ಕೊಲೆ ಪ್ರಕರಣ: ಶಂಕಿತ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ಗಾಯಗೊಂಡ ಆರೋಪಿ ಮತ್ತು ಪೊಲೀಸರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸಿಕ್ಕಿದ್ದಾರೆ ಎಂದು ತಿಳಿಸಿದರು.
ಸಿಕ್ಕಿಬಿದ್ದಿರುವ ಆರೋಪಿ ಮೇಲೆ ಸಾಕಷ್ಟು ಪ್ರಕರಣಗಳಿವೆ. ನಾವು ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ಗಾಂಜಾ ಲಿಂಕ್ ಜಿಲ್ಲೆಯಲ್ಲಿ ಮಾತ್ರವಿಲ್ಲದೇ ಎಲ್ಲಾ ಜಿಲ್ಲೆಗಳಲ್ಲೂ ಇದೆ. ನಮ್ಮವರು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ತುಂಬಾ ಶ್ರಮ ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.