ಹಾಸನ: ಕೊರೊನಾ ತಡೆಗೆ ಹೋರಾಡುತ್ತಿರುವ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅತ್ಯಾಧುನಿಕ ಮಾಸ್ಕ್ಗಳನ್ನು ಎಸ್ಎಸ್ಎಂ ಆಸ್ಪತ್ರೆ ವತಿಯಿಂದ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್ ಮೂಲಕ ಆರೋಗ್ಯ ಇಲಾಖೆ ಅಧಿಕಾರಿ ಡಾ. ಸತೀಶ್ ಅವರಿಗೆ ಹಸ್ತಾಂತರಿಸಲಾಯಿತು.
ಜಿಲ್ಲೆಯಲ್ಲಿ ಕೊರೊನಾ ತಡೆಯುವ ಕಾರ್ಯವನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇವರ ರಕ್ಷಣೆ ನಮ್ಮೆಲ್ಲರದ್ದಾಗಿದೆ. ಅವರಿಗೆ ಅತ್ಯಾಧುನಿಕ ಮಾಸ್ಕ್ಗಳನ್ನು ಎಸ್.ಎಸ್.ಎಂ. ಆಸ್ಪತ್ರೆ ವತಿಯಿಂದ ನೀಡಲಾಗುತ್ತಿದೆ ಎಂದು ಡಾ. ಸೌಮ್ಯ ದಿನೇಶ್ ತಿಳಿಸಿದರು.
ಸೋಂಕಿತರನ್ನು ಕಾಪಾಡುವ ವೈದ್ಯರು ಮತ್ತು ಸಿಬ್ಬಂದಿಯನ್ನು ಉಳಿಸುವುದು ಮೊದಲ ಆದ್ಯತೆಯಾಗಿದೆ. ಕೊರೊನಾ ತಡೆಗೆ ಸರ್ಕಾರದೊಂದಿಗೆ ಕೈ ಜೋಡಿಸಿ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಮಾತನಾಡಿ, ಇಲ್ಲಿ ಕೊಡಲಾದ ಮಾಸ್ಕ್ಗಳನ್ನು ಕನಿಷ್ಠ ಒಂದು ವರ್ಷ ನಿರಂತರವಾಗಿ ಉಪಯೋಗಿಸಬಹುದು. ಸೋಂಕಿತರ ವಾರ್ಡ್ಗಳಿಗೆ ಹೋಗುವಾಗ ಇವುಗಳನ್ನು ಬಳಸುವುದರಿಂದ ಸಿಬ್ಬಂದಿ, ವೈದ್ಯರು ಸುರಕ್ಷಿತವಾಗಿರುತ್ತಾರೆ ಎಂದರು.