ಹಾಸನ: ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಲು ಮುಂದಾಗಿದ್ದ ಆರು ಮಂದಿ ಆರೋಪಿಗಳನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ವಲಯ ಅರಣ್ಯ ಅಧಿಕಾರಿಗಳ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರವಿ (32), ವೆಂಕಟೇಶ್ (28), ಸ್ವಾಮಿ (32), ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಅಜಿತ್ (37), ಕೆ.ಎಂ ರಾಜು (31) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ದಿನೇಶ್ (32) ತಪ್ಪಿಸಿಕೊಂಡಿದ್ದು ಆತನಿಗಾಗಿ ಅರಣ್ಯ ವಲಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಇವರೆಲ್ಲ ನಿನ್ನೆ ಅರಕಲಗೂಡು ತಾಲೂಕಿನ ಕುನ್ನೂರು ಬಳಿ ಕಬ್ಬಳ್ಳಿ ಅರಣ್ಯಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಲಯ ಅರಣ್ಯ ಅಧಿಕಾರಿಗಳ ತಂಡ ಸದ್ಯ ಐದು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನು ಬಂಧಿತರಿಂದ 1 ಡಬಲ್ ಬ್ಯಾರೆಲ್ ಪಿಸ್ತೂಲು, 2 ಸಿಂಗಲ್ ಬ್ಯಾರೆಲ್ ಪಿಸ್ತೂಲು, 15 ಕಾರ್ಟ್ರಿಡ್ಜ್ ಗನ್ ಕವರ್, ಮತ್ತು 5 ಮೊಬೈಲ್ ಫೋನ್ಗಳನ್ನು ಸೇರಿದಂತೆ 1 ದ್ವಿಚಕ್ರ ವಾಹನ ಮತ್ತು ಜೀಪನ್ನು ವಶಪಡಿಸಿಕೊಳ್ಳಲಾಗಿದೆ.
ಕಾಡುಪ್ರಾಣಿಗಳ ಬೇಟೆಯಾಡುವ ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಉಪವಲಯ ಅರಣ್ಯಾಧಿಕಾರಿ ಗುರುಸ್ವಾಮಿ ಅರಣ್ಯ ರಕ್ಷಕ ರಾಘವೇಂದ್ರ ಕುಮಾರ್, ದೇವೇಂದ್ರ, ಸುಭಾಷ್ ಕುಮಾರ್, ಮಂಜುನಾಥ್, ಬಸವೇಗೌಡ, ಧರ್ಮೇಗೌಡ ವಿಜುಗೌಡರನ್ನು ಡಿಎಫ್ಓ ಶಿವರಾಮ ಬಾಬು ಅಭಿನಂದಿಸಿದ್ದಾರೆ.