ಹಾಸನ/ಹೊಳೆನರಸೀಪುರ: ಎಲ್ಲಿ ಮತ್ತೆ ನಾನು ಮುಖ್ಯಮಂತ್ರಿಯಾಗಿ ಬಿಡುತ್ತೇನೋ ಎಂದು ಕೆಲವರು ನನ್ನ ಮೇಲೆ ಷಡ್ಯಂತ್ರ ರೂಪಿಸಿದರು. ಹಾಗಾಗಿ ಪಕ್ಷ ಒಡೆದು ಬಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿಕೊಪ್ಪಲು ಗ್ರಾಮದಲ್ಲಿ ನೂತನ ದೇವಾಲಯ ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿದ ಅವರು, ನನ್ನ ಸರ್ಕಾರದಲ್ಲಿ ಎಲ್ಲಾ ವರ್ಗದವರ ಪರ ಕಾರ್ಯಕ್ರಮ ನೀಡಿದ್ದೇನೆ. ಡಿ.ದೇವರಾಜ್ ಅರಸು ಅವರ ನಂತರ ನಾನೇ ರಾಜ್ಯದಲ್ಲಿ ಸಂಪೂರ್ಣ 5 ವರ್ಷ ಆಡಳಿತ ಮುಗಿಸಿದ ಸಿಎಂ ಎಂದರು. ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಿಟ್ಟಾನು ಎಂದು ಕೆಲವರು ನನ್ನ ಮೇಲೆ ಷಡ್ಯಂತ್ರ ರೂಪಿಸಿದರು. ಇದರಿಂದ ಪಕ್ಷವೇ ಒಡೆದು ಬಿತ್ತು ಎಂದರು.
ನನ್ನ ಸರ್ಕಾರದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಯೋಜಿಸಿದ್ದೆ. ಆದರೆ ಇಂದು ಬಿಜೆಪಿ ಅದನ್ನು ಸದ್ದಿಲ್ಲದೆ ಜಾರಿಗೆ ತಂದಿದೆ. ಇದಕ್ಕೆ ಮಾಜಿ ಸಚಿವ ಎ.ಮಂಜು ಸಹ ನನ್ನ ಕ್ಯಾಬಿನೆಟ್ನಲ್ಲಿ ಸಹಿ ಹಾಕಿದ್ದಾರೆ. ಏಕೆಂದ್ರೆ ಅಂದು ಅವರು ನಮ್ಮ ಪಕ್ಷದಲ್ಲಿದ್ದರು. ಪ್ರಸ್ತುತ ಅವರು ಬಿಜೆಪಿ ಸಭೆಯಲ್ಲಿ ಹೇಳಬೇಕಿದೆ ಎಂದು ಕಾಲೆಳೆದರು.
ಪ್ರತಿ ಗ್ರಾಮದ ಶಾಲೆ, ದೇವಾಲಯಗಳು ಆ ಗ್ರಾಮದ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಕೆಲವರು ಧರ್ಮದ ಹೆಸರಿನಲ್ಲಿ ಜಾತಿ ಸಾಮರಸ್ಯವನ್ನು ಕದಡಲು ಹುಳಿ ಹಿಂಡುತ್ತಾರೆ. ಇನ್ನು ಕೆಲವರು ಹಾಲನ್ನೇ ಕೆಡಿಸಿ ಬಿಡುತ್ತಾರೆ. ಕುವೆಂಪು ವಾಣಿ ನೆನಪಿಗೆ ತಂದ ಸಿದ್ದರಾಮಯ್ಯ, ಹುಟ್ಟುತ್ತ ಮಗು ವಿಶ್ವಮಾನವ, ಆದರೆ ಸಾಮಾಜಿಕ ವ್ಯವಸ್ಥೆಯ ಪ್ರಭಾವದಿಂದ ಅಲ್ಪಮಾನವರಾಗುತ್ತಾರೆ ಎಂದೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿದರು.
ನಾನು ಸಿದ್ದರಾಮಯ್ಯ ಅಷ್ಟೇ:
ನಾನು ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಅಭಿಮಾನಕ್ಕೆಂದು ಹೌದು ಹುಲಿಯಾ ಎಂದು ಕೂಗಿದರು. ನಾನು ಏಯ್ ಸುಮ್ಮನಿರಯ್ಯ ಎಂದೆ. ನಂತರವೂ ಅಭಿಮಾನದಿಂದ ಕೂಗಿದರು. ಇಲ್ಲೂ ನೀವೂ ಇದನ್ನೇ ಮುಂದುವರೆಸಿದ್ದೀರಾ. ನಾನ್ಯಾವ ಹುಲಿನೂ ಅಲ್ಲ. ಸಿಂಹನೂ ಅಲ್ಲ. ನಾನು ಸಿದ್ದರಾಮಯ್ಯ ಅಷ್ಟೆ. ನಾನು ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಬಂದ ಮೇಲೂ ನನ್ನ ಸೂಚನೆಯನ್ನು ಗೌರವಿಸಿದ್ದೀರಿ. ವೈಯಕ್ತಿಕವಾಗಿ ಬೆಂಬಲ ನೀಡಿದ್ದೀರಿ ನಿಮ್ಮ ಅಭಿಮಾನಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.