ಹಾಸನ: ಪ್ರತಿನಿತ್ಯ ಸಾವಿರಾರು ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ತಿಂಡಿ ನೀಡುತ್ತಿರುವ ನಗರದ ಹಾಸನಾಂಬ ದೇವಾಲಯ ರಸ್ತೆಯ ಶೀ ಚನ್ನಕೇಶವ ದೇವಸ್ಥಾನದ ಬಳಿ ಇರುವ ತೇರ ಪಂತ್ ಜೈನ ಸಭಾಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ರು.
ಮೊದಲು ಸಾಮಾಜಿಕ ಅಂತರ ಕಾಪಾಡಿಕೊಂಡು ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು. ಕೊನೆಯಲ್ಲಿ ಜೈನ ಮಾತಾಜಿಯಿಂದ ಆಶೀರ್ವಚನ ಪಡೆಯುವಾಗ ಎಲ್ಲಾ ಒಟ್ಟಾಗಿ ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಸರಳ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಜೈನ ಸಭಾದಿಂದ ಮಾಡುತ್ತಿರುವ ಅಳಿಲು ಸೇವೆ ದೊಡ್ಡದಾಗಿದೆ. ದೇಶವೇ ಲಾಕ್ಡೌನ್ ಆಗಿರುವುದರಿಂದ ಕೂಲಿ ಕೆಲಸ ಮಾಡಿ, ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡವರಂತೂ ಬೀದಿಪಾಲಾಗುವ ಸ್ಥಿತಿಗೆ ಬಂದಿದ್ದಾರೆ. ಅಂತವರನ್ನು ಗುರುತಿಸಿ ಬೆಳಗಿನ ಉಪಹಾರವನ್ನು ನಿರಂತರವಾಗಿ ಕೊಡುತ್ತಿರುವುದನ್ನು ಹಾಸನದ ಜನತೆ ಮರೆಯುವುದಿಲ್ಲ. ನಿಮ್ಮ ಉತ್ತಮ ಸೇವೆಗೆ ನನ್ನಿಂದ ಸಹಕಾರ ಇರುತ್ತದೆ ಎಂದರು.
ಎಂತಹ ಸಂದರ್ಭದಲ್ಲೂ ನಿಮ್ಮ ಸೇವೆ ನಿರಂತರವಾಗಿರಲಿ. ನಾಲ್ಕು ಜನರಿಗೆ ಅನ್ನ ಹಾಕುವ ಕೆಲಸ ಎಂದರೆ ಬಹಳ ಶ್ರೇಷ್ಠವಾಗಿದೆ ಎಂದರು. ಬಳಿಕ ಜೈನ ಸಭಾದಲ್ಲಿ ತಯಾರು ಮಾಡುವ ಅಡುಗೆ ಮನೆಯ ಕೆಲಸವನ್ನು ವೀಕ್ಷಣೆ ಮಾಡಿ, ಪ್ರತಿನಿತ್ಯ ತಿಂಡಿಯನ್ನು ಎಲ್ಲೆಲ್ಲಿಗೆ ಕೊಂಡೊಯ್ಯಲಾಗುತ್ತದೆ ಎಂಬುದರ ವಿವರ ಪಡೆದರು.