ಸಕಲೇಶಪುರ : ಕೊರೊನಾ ನಿಯಂತ್ರಿಸಲು ಪಟ್ಟಣದಲ್ಲಿ ವರ್ತಕರು ಕೈಗೊಂಡಿರುವ ಸ್ವಯಂ ಪ್ರೇರಿತ ಲಾಕ್‌ಡೌನ್ ಮೊದಲ ದಿನ ಯಶಸ್ವಿಯಾಯಿತು.
ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ಎಚ್. ಕೆ ಕುಮಾರಸ್ವಾಮಿ ಸೋಮವಾರ ಲಾಕ್‌ಡೌನ್ ಮಾಡುವ ಕುರಿತು ಪುರಭವನದಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ವರ್ತಕರ ಸಭೆ ನಡೆಸಿದ್ದರು. ಸಭೆಯಲ್ಲಿ ಮುಂಜಾನೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ವರ್ತಕರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 3 ಗಂಟೆಯ ನಂತರ ಅಂಗಡಿಗಳನ್ನು ಬಂದ್ ಮಾಡಿದ್ದರು. ಈಗಾಗಲೆ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಇದೇ ರೀತಿಯಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನ ಹೋಬಳಿ ಕೇಂದ್ರಗಳಲ್ಲೂ ಸಹ ಸ್ವಯಂ ಪ್ರೇರಿತ ಬಂದ್ ಮಾಡುವ ಸಾಧ್ಯತೆಯಿದೆ.