ಹಾಸನ: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಇಲ್ಲಿನ ರಕ್ಷಣಾಪುರಂ ನಿವಾಸಿ ಸುಚಿತ್ರಾ (33) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಚಿತ್ರಾ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಗ್ರಾಮ ಒನ್ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕಿ ಆಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಪತಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಅನುಕಂಪದ ಆಧಾರದ ಹಿನ್ನೆಲೆ ಪತ್ನಿ ಸುಚಿತ್ರಾಗೆ ಸರ್ಕಾರ ಕೆಲಸ ನೀಡಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹ ರಕ್ಷಕ ದಳ ಸಿಬ್ಬಂದಿ ಸಾವು: ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ನಿಮಿತ್ತ ಕರ್ತವ್ಯಕ್ಕೆ ಹಾಜರಾಗಿ ವಾಪಸ್ ಆಗುವಾಗ ಮಂಡ್ಯದ ಮಳವಳ್ಳಿ ತಾಲೂಕಿನ ಬೆಳಕವಾಡಿಯ ಸಿದ್ದು ಎಂಬ ಗೃಹರಕ್ಷಕ ದಳ ಸಿಬ್ಬಂದಿ ಮೃತಪಟ್ಟ ಘಟನೆ ನಡೆದಿದೆ. ಚುನಾವಣೆ ಮುಗಿಸಿಕೊಂಡು ಮದ್ಯಪ್ರದೇಶದಿಂದ ಬೆಂಗಳೂರಿಗೆ ರೈಲಿನಲ್ಲಿ ವಾಪಸ್ ಆಗುವಾಗ ಲೋ ಬಿಪಿಯಾಗಿ ರೈಲಿನ ಶೌಚಗೃಹದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇದೊಂದು ಸಹಜ ಸಾವು ಅಂತ ವೈದ್ಯರು ಕೂಡ ಖಚಿಪಡಿಸಿದ್ದಾರೆ. ಇವತ್ತು ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಮ್ಮ ಮೇಲಧಿಕಾರಿಗಳು ಸಹ ಸಿದ್ದು ಅವರ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಕಚೇರಿ ವತಿಯಿಂದ ಅವರ ಕುಟುಂಬಕ್ಕೆ ಏನು ಸಹಕಾರ ಸಿಗಬೇಕೋ ಅದನ್ನು ಮಾಡಿಕೊಡುವುದಾಗಿಯೂ ತಿಳಿಸಿದ್ದಾರೆ ಎಂದು ಜಿಲ್ಲಾ ಕಮಾಂಡೋ ವಿನೋದ್ ಖನ್ನಾ ತಿಳಿಸಿದರು.
ಮಂಡ್ಯದ 200 ಸಿಬ್ಬಂದಿ ತೆರಳಿದ್ದು ಎಲ್ಲರಿಗೂ ರೈಲಿನ ವ್ಯವಸ್ಥೆ ಕಲ್ಪಿಸಿ ವಾಪಸ್ ಕಳುಹಿಸಿ ಕೊಡಲಾಗಿತ್ತು. ವಾಪಸ್ ಬರುತ್ತಿದ್ದಾಗ ಶುಕ್ರವಾರ ಇನ್ನೇನು ಬೆಂಗಳೂರಿಗೆ ಬರಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಶೌಚಾಲಯಕ್ಕೆ ತೆರಳಿದ್ದ ಸಿದ್ದು ಲೋ ಬಿಪಿಯಿಂದಾಗಿ ಅಲ್ಲೇ ಕುಸಿದು ಬಿದ್ದಿದ್ದರು. ನಂತರ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಶವವನ್ನು ಹುಟ್ಟೂರು ಬೆಳಕವಾಡಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಕಚೇರಿಯಲ್ಲಿ ಮಹಿಳಾ ಅಧಿಕಾರಿಯ ರೌದ್ರಾವತಾರ, ಕಂಪ್ಯೂಟರ್ ಪುಡಿ - ಪುಡಿ, ಸಿಬ್ಬಂದಿ ತಲೆಗೆ ಪೆಟ್ಟು: ವಿಡಿಯೋ