ಹಾಸನ/ ಬೇಲೂರು: ಶಿಕ್ಷಕರು ನಮ್ಮ ಭವಿಷ್ಯವನ್ನು ಮಾತ್ರ ರೂಪಿಸುವುದಿಲ್ಲ. ಅವರು ಮನಸ್ಸು ಮಾಡಿದರೆ ಮಕ್ಕಳ ಬಡತನವನ್ನು ಕೂಡಾ ದೂರವಾಗಿಸಬಹುದು ಎಂಬುದಕ್ಕೆ ಇಲ್ಲೊಬ್ಬರು ಶಿಕ್ಷಕರು ನಿದರ್ಶನ.
ಈ ಶಿಕ್ಷಕನ ಹೆಸರು ಎಂ.ಎಂ.ಮಂಜೇಗೌಡ. ಬೇಲೂರು ತಾಲೂಕಿನ ಶೆಟ್ಟಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಕಡೆಯಿಂದ ವರ್ಗಾವಣೆಯ ಮೂಲಕ ಶಾಲೆಗೆ ಬಂದ ಮಂಜೇಗೌಡರಿಗೆ ಶಾಲೆಯಲ್ಲಿದ್ದ 10 ಗುಂಟೆ ಜಾಗ ನೋಡಿ ಕೈತೋಟ ಮಾಡುವ ಹಂಬಲ ಉಂಟಾಯಿತು.

ಎಸ್.ಡಿ.ಎಂ.ಸಿ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಬೆಂಬಲ ಪಡೆದು ಈ ಜಾಗದಲ್ಲಿ ಮಕ್ಕಳ ಬಿಸಿಯೂಟಕ್ಕೆ ಬೇಕಾಗುವಂತಹ ವಿವಿಧ ರೀತಿಯ ತರಕಾರಿ ಹಾಗು ವಿವಿಧ ಜಾತಿಯ ಸೊಪ್ಪುಗಳನ್ನು ಬೆಳೆದಿದ್ದಾರೆ.
ಅಷ್ಟೇ ಅಲ್ಲ, ಬಿಸಿಯೂಟಕ್ಕೆ ಬಳಸಿ ಮಿಕ್ಕಿದ ತರಕಾರಿಗಳನ್ನು ಮಾರಾಟ ಮಾಡಿ ಅದರಿಂದ ದೊರೆತ ಹಣವನ್ನು ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಸಾಕ್ಸ್, ಶೂ ಹಾಗು ನೋಟ್ ಬುಕ್ ಖರೀದಿಸಿ ಬಡತನವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಕೂಡ ಮೇಲೆತ್ತುವ ಇವರ ಕಾರ್ಯ ಶಿಕ್ಷಣ ಇಲಾಖೆಯ ಪ್ರಶಂಸೆಗೂ ಪಾತ್ರವಾಗಿದೆ.
ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ: ಕ್ಷಮೆ ಯಾಚಿಸಿದ ರೇಣುಕಾಚಾರ್ಯ